Karwar| ಜಿಲ್ಲೆಯಲ್ಲಿ ಎಗ್ಗಿಲದೇ ನಡೆಯುತ್ತಿರುವ ನಂಬರ್ ಗೇಮ್ ‘ಮಟ್ಕಾ’ ಅಡ್ಡೆ ಮೇಲೆ ಸಿದ್ದಾಪುರ ಹಾಗೂ ಬನವಾಸಿಯಲ್ಲಿ ಪೋಲಿಸರು ದಾಳಿ ನಡೆಸಿ, ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಬನವಾಸಿಯಲ್ಲಿ ಪೋಲಿಸರು ದಾಳಿ ನಡೆಸಿ ಮಠದ ಓಣಿಯ
ಮಾಲತೇಶ ನಾರಾಯಣ ಕನ್ನಿ (60) ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈತ ಬನವಾಸಿ – ಸೊರಬಾ ರಸ್ತೆ ಬಳಿಯ ಪಂಪವನ ಐ.ಬಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾಗ ಪೋಲಿಸರು ದಾಳಿ ನಡೆಸಿ, ಓ.ಸಿ ಚೀಟಿ, ನಗದು ಹಣ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡು, ಆತನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಸಿದ್ದಾಪುರದಲ್ಲಿ ಲಕ್ಷ್ಮಿನಗರದ
ದೇವರಾಜ ವೀರಭದ್ರ ನಾಯ್ಕ ಎಂಬಾತ ಪಟ್ಟಣದ ಭಗತಸಿಂಗ್ ಸರ್ಕಲ್ ಬಳಿ ಓ.ಸಿ ಚೀಟಿ ಬರೆದುಕೊಡುತ್ತಿದ್ದಾಗ ಪೋಲಿಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಖ್ಯೆ ಬರೆಯಲಾದ ಓಸಿ ಚೀಟಿ, ನಗದು ಹಣ, ಓಸಿ ನಂಬರ್ ಬರೆಯಲು ಬಳಸುವ ಪೇಪರ್ ತುಣುಕುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಟ್ಕಾ ದಂಧೆ ಜಿಲ್ಲೆಯಲ್ಲಿ ಸರ್ವವ್ಯಾಪಿಯಾಗಿದ್ದು, ಬಹುತೇಕ ಕೂಲಿಕಾರರು, ಬಡವರು ತಾವು ದುಡಿದ ದುಡ್ಡನ್ನು ಈ ಮಟ್ಕಾ ಎಂಬ ಅದೃಷ್ಟದ ಸಂಖ್ಯೆಯ ಆಟದ ಮೇಲೆ ಸುರಿದು ಇದ್ದದ್ದೆಲ್ಲವನ್ನು ಕಳೆದುಕೊಳ್ಳುತ್ತಿದ್ದಾರೆ. ಪೋಲಿಸರು ಕೆಲ ಅಮಾಯಕರ ಮೇಲಷ್ಟೇ ಕಾಟಾಚಾರದ ದಾಳಿ ನಡೆಸಿ, ತೋರಿಕೆಗೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಮಾಯಕರ ಮೇಲೆ ದಾಳಿ ನಡೆಸುವ ಬದಲು ಈ ವ್ಯವಹಾರ ನಡೆಸುವ ದೊಡ್ಡ ದೊಡ್ಡ ಕುಳಗಳು, ಬುಕ್ಕಿಗಳ ಮೇಲೆ ದಾಳಿ ನಡೆಸಿ, ಅವರ ಹೆಡೆಮುರಿ ಕಟ್ಟುವ ಧೈರ್ಯ ಪೋಲಿಸರು ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯ.
