Karwar| ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ತೀವ್ರ ಪ್ರಯತ್ನ ನಡೆಸುತ್ತಿದ್ದು, ತಮ್ಮ ‘ಕೇರಳ’ ಲಿಂಕ್ ಬಳಸಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಶತಾಯುಗತಾಯ ಪ್ರಯತ್ನ ನಡೆಸುತ್ತಿದ್ದಾರೆನ್ನಲಾಗಿದೆ.
ಕಳೆದ ಬಾರಿ ಮರಾಠಾ ಕೋಟಾದಲ್ಲಿ ಸಂತೋಷ ಲಾಡ್ ಸಚಿವ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಮರಾಠಾ ಕೋಟಾದಲ್ಲಿ ತನಗೆ ಅವಕಾಶ ಮಾಡಿಕೊಡುವಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಸೈಲ್ ವಿನಂತಿಸುತ್ತಿದ್ದಾರೆ.
ತಾನು ಸಚಿವನಾಗಲಿ ಎಂದು ತನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಯಾರೂ ಕೂಡಾ ತನ್ನ ಪರ ಬ್ಯಾಟಿಂಗ್ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಸತೀಶ ಸೈಲ್ ಮಾಧ್ಯಮದ ಎದುರೇ ತಮ್ಮ ಅಸಮಾಧಾನ ಬಹಿರಂಗ ಪಡಿಸಿದ್ದರು. ತನ್ನ ಪರವಾಗಿ ಆಂತರಿಕವಾಗಿಯಾಗಲಿ ಅಥವಾ ಬಹಿರಂಗವಾಗಲಿ ಯಾರೋಬ್ಬರು ಸಚಿವ ಸ್ಥಾನಕ್ಕಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂದು ತಿಳಿದ ಸೈಲ್, ತನ್ನ ಪರವಾಗಿ ತಾನೇ ಏಕಾಂಗಿಯಾಗಿ ಸಚಿವ ಸ್ಥಾನ ಪಡೆಯಲು ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಅದಿರು ಪ್ರಕರಣದಲ್ಲಿ ಡಜನ್ ಗಟ್ಟಲೇ ಪ್ರಕರಣ ಮೈಮೇಲಿದ್ದು, ಇಡಿ, ಸಿಬಿಐ ಸೇರಿದಂತೆ ಕೇಂದ್ರದ ತನಿಖಾ ಸಂಸ್ಥೆಗಳು, ಪದೇ ಪದೇ ನೆಂಟರಂತೆ ಸೈಲ್ ಮನೆಗೆ ದಾಳಿ ಇಡುತ್ತಿದ್ದಾರೆ. ಅಲ್ಲದೇ ಶಾಸಕ ಸ್ಥಾನ ಒಂದು ರೀತಿ ಆಟಕ್ಕುಂಟು ಲೆಕ್ಕಕಿಲ್ಲದ ಪರಿಸ್ಥಿತಿ ಸೈಲ್ ಅವರದು. ಕಲಾಪಕ್ಕೆ ಹಾಜರಾಗದ, ಚರ್ಚೆಯಲ್ಲಿ ಭಾಗವಹಿಸಲಾರದ ಮುಜುಗರದ ಪರಿಸ್ಥಿತಿ. ಜೊತೆಗೆ ವೈದ್ಯಕೀಯ ಕಾರಣದ ಮೇಲೆ ಬೇಲ್ ನಲ್ಲಿದ್ದಾರೆ. ಇದನ್ನೆಲ್ಲಾ ನೋಡಿ ವರಿಷ್ಠರು ಪ್ರಕರಣ ಮುಗಿಸಿಕೊಳ್ಳಿ ನಂತರ ನೋಡೋಣ ಎಂದು ಹೇಳಿದ್ದಾರಂತೆ.
ಒಂದು ಕಾಲದ ಕುಚಿಕು ಗೆಳೆಯನಂತಿದ್ದ ಹಾಗೂ ಹಳೆಯ ಉಸ್ತುವಾರಿ ಮಂಕಾಳು ವೈದ್ಯ ರೊಂದಿಗೆ ಸತೀಶ ಸೈಲ್ ಸ್ನೇಹ ಮುರಿದು ಬಿದ್ದಿದೆ. ಹೀಗಾಗಿ ತನ್ನ ಹಳೆಯ ಸ್ನೇಹಿತನಿಗೆ ‘ಟಕ್ಕರ್’ ನೀಡಲು ‘ಆಜ್ ನಹೀ ತೋ ಕಭಿ ನಹಿ’ ಎನ್ನುವಂತೆ ತನ್ನೆಲ್ಲಾ ‘ಕಾಂಟೆಕ್ಟ್ಸ್’ ಬಳಸಿ ಸತೀಶ ಸೈಲ್ ಸಚಿವ ಸ್ಥಾನ ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಅಥವಾ ಇಲ್ಲಾ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
