Dandeli| ಟಿಪ್ಪರ್ ವಾಹನ ಖರೀದಿಸುವ ನೆಪದಲ್ಲಿ ಮಾಲೀಕರನ್ನು ನಂಬಿಸಿ ವಾಹನ ಪಡೆದು, ಒಪ್ಪಂದದಂತೆ ಹಣ ಪಾವತಿಸದೇ ಹಾಗೂ ವಾಹನವನ್ನು ಮರಳಿಸದೇ ವಂಚಿಸಿದ ಬಗ್ಗೆ ಸುಮಾರು ಎರಡು ವರ್ಷಗಳ ನಂತರ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಶೀರ್ ಇಸ್ಮಾಯಿಲ್ ಮುಲ್ಲಾ ನೀಡಿದ ದೂರಿನ ಪ್ರಕಾರ, 2024ರ ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ದಾಂಡೇಲಿಯ ಟೌನ್ಶಿಪ್ ಪೌಜಲ್ ಮಸೀದಿ ಸಮೀಪ ತನ್ನ ಮಗನ ಮನೆ ಬಳಿ ಆರೋಪಿತರಾದ ಸಾಹೇಬಲಾಲ ರಸೂಲಸಾಬ ಶೇಖ, ಮೇಹತಾಬಸಾಬ್ ಹಾಗೂ ಮತ್ತೊಬ್ಬ ಗುರುತು ತಿಳಿಯದ ಚಾಲಕ ಮೂವರ ಬಂದು, ಅಶೋಕ್ ಲೇಲ್ಯಾಂಡ್ 10 ಗಾಲಿಯ ಟಿಪ್ಪರ್ (ಕೆಎ-05-ಎಎ-7142) ಖರೀದಿಸುವುದಾಗಿ ತಿಳಿಸಿದ್ದರು.
ನಂತರ ವಾಹನ ಬೈಲಹೊಂಗಲದಲ್ಲಿದ್ದ ಕಾರಣ ಅಲ್ಲಿಗೆ ತೆರಳಿ, ₹5 ಲಕ್ಷಕ್ಕೆ ವಾಹನ ಖರೀದಿ ಮಾಡುವ ಮಾತುಕತೆ ನಡೆಸಿ, ₹80 ಸಾವಿರ ಮುಂಗಡ ಹಣ ನೀಡಿ ಒಪ್ಪಂದ ಮಾಡಿಕೊಂಡಿದ್ದಾರೆ. ಉಳಿದ ಹಣವನ್ನು ನಂತರ ನೀಡುವುದಾಗಿ ಹೇಳಿ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ, ಒಪ್ಪಂದದ ಅವಧಿ ಮುಗಿದರೂ ಉಳಿದ ಹಣವನ್ನು ಪಾವತಿಸದೇ, ವಾಹನವನ್ನೂ ಮರಳಿಸದೆ ದೂರುದಾರರಿಗೆ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
