Karwar| ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ಕರಾವಳಿಯುದ್ದಕ್ಕೂ ಯಾಂತ್ರೀಕೃತ ಮೀನುಗಾರಿಕೆಗೆ ಜೂನ್ 1ರಿಂದ ಜುಲೈ 31ರವರೆಗೆ 61 ದಿನಗಳ ನಿಷೇಧ ಹೇರಲಾಗಿದೆ.
ಮೀನುಗಾರಿಕೆ ಇಲಾಖೆಯ ಆದೇಶದಂತೆ, ಯಾಂತ್ರೀಕೃತ ದೋಣಿಗಳು ಹಾಗೂ 10 ಹೆಚ್.ಪಿ.ಗಿಂತ ಅಧಿಕ ಸಾಮರ್ಥ್ಯದ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಎಂಜಿನ್ ಅಳವಡಿಸಿರುವ ಮೀನುಗಾರಿಕೆ ದೋಣಿಗಳಲ್ಲಿ ಯಾವುದೇ ಬಲೆ ಅಥವಾ ಸಾಧನಗಳನ್ನು ಬಳಸಿ ಮೀನುಗಾರಿಕೆ ನಡೆಸುವುದನ್ನು ಈ ಅವಧಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೆ, ದೋಣಿಗಳ ಸಂಚಾರಕ್ಕಾಗಿ 10 ಹೆಚ್.ಪಿ.ವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿಗಳು ಹಾಗೂ ಸಾಂಪ್ರದಾಯಿಕ ನಾಡದೋಣಿಗಳಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ.
ನಿಷೇಧಿತ ಅವಧಿಯಲ್ಲಿ ಸರ್ಕಾರದ ಆದೇಶಗಳನ್ನು ಎಲ್ಲಾ ಯಾಂತ್ರೀಕೃತ ದೋಣಿ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಸರ್ಕಾರದಿಂದ ದೊರೆಯುವ ತೆರಿಗೆ ರಹಿತ ಡೀಸೆಲ್ ಸೇರಿದಂತೆ ಇತರ ಸೌಲಭ್ಯಗಳನ್ನು ರದ್ದುಗೊಳಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಪ್ರದೇಶದ ಮೀನು ಸಂಪತ್ತಿನ ಸಂರಕ್ಷಣೆ ಹಾಗೂ ಮೀನುಗಾರರ ಹಿತದೃಷ್ಟಿಯಿಂದ ಹೊರಡಿಸಲಾದ ಈ ಆದೇಶಕ್ಕೆ ಎಲ್ಲ ಮೀನುಗಾರರು ಸಹಕರಿಸುವಂತೆ ಇಲಾಖೆಯು ಮನವಿ ಮಾಡಿದೆ.
