Bhatkal| ತಾಲೂಕಿನ ಗೊರಟೆ ಕ್ರಾಸ್‌ನಲ್ಲಿರುವ ಆರಾಧನಾ ಬಾರ್‌ನಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಗಲಾಟೆ ನಡೆದಿದ್ದು, ನಾಲ್ವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದ ಮುಂಡಳ್ಳಿಯ ನೀರಗದ್ದೆ ನಿವಾಸಿಗಳಾದ ಮಹೇಂದ್ರ ಶನಿಯಾರ ನಾಯ್ಕ, ಮಂಜುನಾಥ ಶನಿಯಾರ ನಾಯ್ಕ, ಚಂದನ ಮಾರುತಿ ನಾಯ್ಕ, ರಾಜೇಶ ನಾಗಪ್ಪ ನಾಯ್ಕ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮೇ 10ರಂದು ರಾತ್ರಿ 11:45ರ ಸುಮಾರಿಗೆ ಆರೋಪಿಗಳು ಆರಾಧನಾ ಬಾರ್‌ಗೆ ಬಂದು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಆರ್‌ಸಿಬಿ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಮಹೇಂದ್ರ ನಾಯ್ಕ ಬಿಯರ್ ಬಾಟಲಿಯಿಂದ ಚಿಯರ್ಸ್ ಮಾಡಿ ಬಿಯರ್ ಚೆಲ್ಲಿದ್ದಾನೆ ಎನ್ನಲಾಗಿದೆ. ಇದನ್ನು ಸಿಬ್ಬಂದಿ ವಿರೋಧಿಸಿದಾಗ ಮಾತಿನ ಚಕಮಕಿ ನಡೆದಿದೆ. ಬಾರ್ ಮುಚ್ಚುವ ಸಮಯವಾಗಿದ್ದರಿಂದ ಹಣ ಪಾವತಿಸಲು ಸಿಬ್ಬಂದಿ ತಿಳಿಸಿದಾಗ ಮತ್ತೊಂದು ಬಿಯರ್ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡುವುದಾಗಿ ಹೇಳಿದ ಹಿನ್ನೆಲೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಯರ್ ಬಾಟಲಿ ಒಡೆದು ಗಲಾಟೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಚಂದನ ನಾಯ್ಕ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಸಿಬ್ಬಂದಿಗೆ ಗಾಯಪಡಿಸಿದ್ದಾನೆ. ಮಧ್ಯೆ ಪ್ರವೇಶಿಸಿ ಗಲಾಟೆ ತಡೆಯಲು ಬಂದ ಯಶೋಧರ ನಾಯ್ಕ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್-2023ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
