Karwar| ಕಾರವಾರ ಮೂಲದ ಪರ್ಸಿನ್ ಮೀನುಗಾರಿಕಾ ಬೋಟ್ ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 22 ಮಂದಿ ಮೀನುಗಾರರನ್ನು ಅಕ್ಕಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇತರ ಬೋಟ್‌ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಕಾರವಾರ ತಾಲ್ಲೂಕಿನ ಮುದಗಾ ಬಂದರಿನಿಂದ ಸುಮಾರು ಒಂದು ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಶ್ರೀ ಅಮ್ಮ’ ಹೆಸರಿನ ಬೋಟ್ ದುರ್ಘಟನೆಗೆ ಒಳಗಾಗಿದೆ. ಈ ಬೋಟ್ ಮುದಗಾ ಗ್ರಾಮದ ದಿನೇಶ್ ಕಾಂಚನ್ ಎಂಬುವವರ ಮಾಲೀಕತ್ವದಲ್ಲಿತ್ತು ಎಂದು ತಿಳಿದುಬಂದಿದೆ.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಬೋಟ್‌ಗೆ ನೀರು ನುಗ್ಗಿ ಮುಳುಗಡೆಯಾಗಿದೆ ಎನ್ನಲಾಗಿದೆ. ಘಟನೆ ಗಮನಿಸಿದ ಸಮೀಪದಲ್ಲಿದ್ದ ಇತರ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಟ್‌ನಲ್ಲಿದ್ದ ಎಲ್ಲಾ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಬೋಟ್ ಹಾಗೂ ಮೀನುಗಾರಿಕಾ ಬಲೆಗಳು ಸಮುದ್ರ ಪಾಲಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
