Karwar|ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ’ಯ ಎರಡನೇ ಕಂತಿನ ಮೊತ್ತವು ಇಂದಿನಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ ಎಂದು‌ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ

​ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿ ರೈತರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗಳನ್ನು ತಲುಪಲಿದೆ. ಇದು ಜಿಲ್ಲೆಯ ಕೃಷಿಕ ಕುಟುಂಬಗಳಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

​ಜಿಲ್ಲೆಯ ಅಡಿಕೆ ಬೆಳೆಗಾರರು ಈಗಾಗಲೇ ಎಲೆ ಚುಕ್ಕಿ ರೋಗದ ಬಾಧೆ ಮತ್ತು ಇಳುವರಿ ಕುಂಠಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಕಠಿಣ ಸಮಯದಲ್ಲಿ ಬಾಕಿ ಇದ್ದ ವಿಮೆ ವಿತರಣೆ ಆರಂಭವಾಗಿರುವುದು ಜಿಲ್ಲೆಯ ಕೃಷಿಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೂ ಈ ವಿಮೆಯ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಇದು ರೈತರಿಗೆ ದೊಡ್ಡ ಆಸರೆಯಾಗಲಿದೆ ಎಂದು ಸಂಸದ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.