Karwar | ಅಧಿಕಾರ ಹಾಗೂ ವ್ಯವಸ್ಥೆ ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಬದಲಾವಣೆಯೂ ಆಗಬಹುದು ಎಂದು ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪದೇ ಪದೇ ಶಿಷ್ಟಾಚಾರ (Protocol) ಉಲ್ಲಂಘನೆಯಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇಂದ್ರದ ಜನಪ್ರತಿನಿಧಿಗಳಿಗೆ ಸಮರ್ಪಕ ಗೌರವ ನೀಡದೇ ಇರುವ ಘಟನೆಗಳು ನಡೆಯುತ್ತಿವೆ. ಸರ್ಕಾರದ ನಿಯಮಾನುಸಾರ ಜನಪ್ರತಿನಿಧಿಗಳಿಗೆ ನೀಡಬೇಕಾದ ಸ್ಥಾನಮಾನ ಹಾಗೂ ಮಾಹಿತಿ ನೀಡುವಲ್ಲಿ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದು ಯಾರ ಕುಮ್ಮಕ್ಕಿನಿಂದ ನಡೆಯುತ್ತಿದೆ‌ ಎಂಬುದು ಗೊತ್ತಿದೆ. ಅಧಿಕಾರ ಒಂದೇ‌ ರೀತಿಯಲ್ಲಿ ಇರೊದಿಲ್ಲ. ಬದಲಾವಣೆಯೂ ಆಗುತ್ತಿರುತ್ತದೆ ನೆನಪಿರಲಿ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಹೆಸರು ಹೇಳದೇ ಟಾಂಗ್ ನೀಡಿದರು.

ಇನ್ನು ಶಿಷ್ಟಾಚಾರ ಉಲ್ಲಂಘನೆಯ ಲಿಸ್ಟ್ ಬಹಳ ಇದೆ ಎಂದ ಕಾಗೇರಿ, ಅದನ್ನು ತಿಳಿಸಿದರೆ ಜಿಲ್ಲಾಧಿಕಾರಿಗಳು ಒಬ್ಬ ವಿಶೇಷಾಧಿಕಾರಿಯನ್ನೇ ನಿಯೋಜಿಸಬೇಕಾಗಬಹುದು ಎಂದರು. ಶಿಷ್ಟಾಚಾರದ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳೂ ಸಹ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಅತ್ಯಗತ್ಯ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲಿಷ್ ಶಸಿ‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.