Udupi| ನಗರದ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿರುವ ಅಬ್ದುಲ್ ಖಾದರ್ ಕಮರ್ಷಿಯಲ್ ಕಟ್ಟಡವೊಂದರ ಅಂಗಡಿವೊಂದರಲ್ಲಿ ರವಿವಾರ ಸಂಜೆ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡವೇ ಬೆಂಕಿಗಾಹುತಿಯಾಗಿದೆ.
ಸಂಜೆ 5ಕ್ಕೆ ಅಬ್ದುಲ್ ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ಅವರಿಸಿದ್ದ ಪರಿಣಾಮ 6ಕ್ಕೂ ಮಿಕ್ಕಿ ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ರವಿವಾರ ಸಂಜೆ ಅಂದಾಜು 5ಕ್ಕೆ ಕಟ್ಟಡದ ಮೊದಲ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಮೊದಲ ಮಹಡಿಯ ನೆಲ ಕುಸಿದು, ತಳ ಅಂತಸ್ತಿಗೂ ಬೆಂಕಿ ತಗಲಿದ್ದು, ಕಟ್ಟಡದಲ್ಲಿದ್ದ ಮೊಬೈಲ್ ಶಾಪ್, ಹಾರ್ಡ್ವೇರ್, ಫ್ಯಾನ್ಸಿ ಶಾಪ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿದೆ. ದಟ್ಟ ಹೊಗೆ ಎದ್ದಿದ್ದು, ಬೆಂಕಿಯನ್ನು ಹಾರಿಸುವುದಕ್ಕೆ ಅಗ್ನಿಶಾಮಕ ದಳ ಹರಸಾಹಸ ಪಟ್ಟಿದೆ. ಅವಘಡದಿಂದ ಕೋಟ್ಯಾಂತರ ಅಂದಾಜು ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿವೆ.
ಬೆಂಕಿ ಹೊತ್ತಿಕೊಂಡಿರುವ ಸುದ್ದಿಯನ್ನು ತಿಳಿಯುತ್ತಿದ್ದಂತೇ ಕಟ್ಟಡದ ಸುತ್ತಲೂ ಸಾರ್ವಜನಿಕರು ಬಂದು ಸೇರಿದ್ದರು. ಪಕ್ಕದ ಕಟ್ಟಡವನ್ನು ಏರಿ ಬೆಂಕಿ ನಂದಿಸುವುದಕ್ಕೆ ನೀರು ಎರಚಲು ಪ್ರಯತ್ನ ಪಟ್ಟರೂ ಫಲ ಕೊಡಲಿಲ್ಲ. ಆರಂಭದಲ್ಲಿ ಅಗ್ನಿಶಾಮಕದಳದ ಒಂದು ಟ್ಯಾಂಕರ್ ಬಂದಿದ್ದು, ಬೆಂಕಿ ನಂದಿಸುವುದಕ್ಕೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಇನ್ನೊಂದು ಟ್ಯಾಂಕರ್‌ಯನ್ನು ತರಿಸಲಾಯಿತು. ಅಗ್ನಿಶಾಮಕದಳಕ್ಕೆ ದೂರು ನೀಡಿ ಅರ್ಧ ಗಂಟೆಯ ಬಳಿಕ ಬಂದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ, ಕದ್ರಿ, ಅದಾನಿ ಸೇರಿದಂತೆ ವಿವಿಧೆಡೆಯಿಂದ 6 ಅಗ್ನಿಶಾಮಕದಳದ 30 ಸಿಬ್ಬಂದಿ ಕಾರ್ಯಾಚರಣೆ ಮಾಡಿ ರಾತ್ರಿ 8.30ರ ಬಳಿಕ ಬೆಂಕಿಯನ್ನು ಹತೋಟಿಗೆ ತರಲು ಸಫಲರಾದರು. ಅಕ್ಕಪಕ್ಕದ ಅಂಗಡಿ ಮಾಲಕರು ತಮ್ಮ ಅಂಗಡಿಯಲ್ಲಿದ್ದ ಸೊತ್ತುಗಳನ್ನು ಇತರೆಡೆಗೆ ಸಾಗಿಸಿ ಮುಂಜಾಗೃತಾ ಕ್ರಮ ವಹಿಸಿದರು.
ಉಡುಪಿ ಅಗ್ನಿ ಶಾಮಕ ದಳ ಕಚೇರಿಯಿಂದ ಅವಘಡ ಸಂಭವಿಸಿದ ಸ್ಥಳಕ್ಕೆ ಕೇವಲ ಎರಡು ಕಿ.ಮೀ. ಅಂತರವಿದ್ದು, ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ವಾಹನ ತಲುಪಿದೆ. ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರು, ಅಂಗಡಿ ಮಾಲಕರು ಅಗ್ನಿಶಾಮಕ ದಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಗ್ನಿಶಾಮಕ ದಳದಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲದೇ ಇರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
