Karwar| ನಗರದ ಕಾಜುಬಾಗದ ಮೋರ್ ಸುಪರ್ ಮಾರ್ಕೆಟ್ ಬಳಿ ಭಾನುವಾರ ರಾತ್ರಿ ನಡೆದ ‘ಕಿಡ್ನಾಪ್’ ಪ್ರಹಸನವೊಂದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ‌ ಸೃಷ್ಟಿಸಿತು.

ಅಪರಿಚಿತರು ವಾಹನದಲ್ಲಿ (UP 78 HD2112) ಬಂದು ಇಬ್ಬರು ವ್ಯಕ್ತಿಗಳನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿ ಹರಡುತ್ತಿದ್ದಂತೆ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಆತಂಕ ವ್ಯಕ್ತಪಡಿಸಿದರು. ಅಂತೆಕಂತೆಗಳ ಮಹಾಪೂರವೇ ಹರಿದಾಡಿತು. ನಂತರ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು. ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಿ ಬಂದೋಬಸ್ತ್ ಗೆ ಮುಂದಾದರು. ಕೆಲ ಸಮಯದಲ್ಲೇ ಆ ಕಿಡ್ನಾಪ್ ಮಾಡಿದವರು ನಗರ ಪೋಲಿಸ್ ಠಾಣೆಗೆ ಆಗಮಿಸಿದ್ದಾರೆ ಎಂಬ ಮಾಹಿತಿ ದೊರೆತ ನಂತರ ಪೋಲಿಸರು ಸಹ ನಿಟ್ಟುಸಿರು ಬಿಟ್ಟರು. ಹಾಗೂ ಅಲ್ಲಿ ಸೇರಿದ್ದ ಜನತೆಗೂ ಘಟನೆಯ ಬಗ್ಗೆ ಇದ್ದ ಕುತೂಹಲ ತಣಿಯಿತು.

ಅಸಲಿಯತ್ತು ಏನೆಂದರೆ, ಉತ್ತರಪ್ರದೇಶದಿಂದ ವಾಹನದಲ್ಲಿ ಆಗಮಿಸಿದ್ದ ಪೋಲಿಸರು ಆ ರಾಜ್ಯದಲ್ಲಿ ನಡೆದ ಮಿಸ್ಸಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಚಾರಣೆಗಾಗಿ ಕರೆದೊಯ್ಯಲು ಬಂದಿದ್ದರು. ಆ ಇಬ್ಬರು ಯುವಕರು ಅಲ್ಲಿಯೇ ಹತ್ತಿರದ ಪಿಜಿ (Paying Guest) ಯಲ್ಲಿದ್ದಾರೆ ಎಂಬ ಮಾಹಿತಿ ಪಡೆದು ಅವರನ್ನು ವಶಕ್ಕೆ ಪಡೆದು ಕಾರ್ ನಲ್ಲಿ ಕರೆದೊಯ್ದಿದ್ದಾರೆ. ಘಟನೆಯ ಬಳಿಕ ಉತ್ತರ ಪ್ರದೇಶ ಪೊಲೀಸರ ತಂಡವು ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ, ವಶಕ್ಕೆ ಪಡೆದ ಯುವಕರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಅಂತೂ ‘ಕಿಡ್ನಾಪ್’ ಪ್ರಹಸನವು ಸ್ಥಳೀಯರಲ್ಲಿ ಉಂಟಾಗಿದ್ದ ಗೊಂದಲ ಕೊನೆಗೆ ನಿವಾರಣೆಯಾಯಿತು.