Karwar| ಇಲ್ಲಿನ ಸಮುದ್ರ ತೀರಕ್ಕೆ ತೆರಳುವ ಪ್ರಮುಖ ರಸ್ತೆಯ ಪುಟಪಾತ್ ಮೇಲೆ ಚಿನ್ನದ ಅಂಗಡಿಯ ಜಾಹೀರಾತಿನ ಪ್ಲೇಕ್ಸ್ ಅಳವಡಿಸಲಾಗಿದೆ. ಇದು ಕಣ್ಣಿದ್ದರೂ ಕಾಣದ ನಗರಸಭೆಯ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಈ ದೇಶದ ಕಾನೂನು, ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವುದಿಲ್ಲವೇ? ಅದು ಕೇವಲ ಸಾಮಾನ್ಯ ಜನರಿಗೆ ಮಾತ್ರವೇ?’ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಪಾದಚಾರಿಗಳ ಸಂಚಾರಕ್ಕೆ ಮೀಸಲಾದ ಪುಟಪಾತ್ ಮೇಲೆ ಇಂತಹ ಜಾಹೀರಾತು ಫಲಕಗಳನ್ನು ಅಳವಡಿಸುವುದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರಸಭೆ ಅನಧಿಕೃತ ಗೂಡಂಗಡಿಗಳನ್ನು ತೆರವಿಗೆ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಇದೇ ರೀತಿಯ ನಿಯಮ ಉಲ್ಲಂಘನೆಯಾಗಿರುವ ಪುಟಪಾತ್ ಮೇಲಿನ ಪ್ಲೇಕ್ಸ್‌ಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು ಜನತೆಯಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.

ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾದ ಫುಟ್‌ಪಾತ್‌ಗಳನ್ನು ಹೀಗೆ ವಾಣಿಜ್ಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅತ್ಯಂತ ಜನನಿಬಿಡವಾಗಿರುವ ಈ ರಸ್ತೆಯಲ್ಲಿ ಫ್ಲೆಕ್ಸ್‌ಗಳನ್ನು ಹಾಕಲು ನಗರಸಭೆಯು ಖಾಸಗಿಯವರಿಗೆ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಸ್ಥಳೀಯ ಆಡಳಿತವೇ ನಿಯಮಗಳನ್ನು ಗಾಳಿಗೆ ತೂರಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಲು ಅವಕಾಶ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯ ಮೇಲೆಯೇ ಸಂಚರಿಸುವಂತಾಗಿದ್ದು, ಅಪಘಾತಗಳ ಭೀತಿಯೂ ಎದುರಾಗಿದೆ.

ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಹಕ್ಕುಗಳನ್ನು ಕಾಪಾಡಲು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಈ ಪ್ಲೇಕ್ಸ್ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.