Dandeli| ಡ್ರಗ್ಸ್ ಮಾರಾಟ, ಸಾಗಣೆ ಹಾಗೂ ಸಂಗ್ರಹಣೆ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ಡ್ರಗ್ ಪೆಡ್ಲರ್ನೊಬ್ಬನನ್ನು PIT NDPS (Prevention of Illicit Traffic in Narcotic Drugs and Psychotropic Substances Act, 1988 (PITNDPS Act) ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷನಗರ ನಿವಾಸಿ ಆಯಾನ್ @ ಶಾನವಾಜ್ ತಂದೆ ಇಮ್ತಿಯಾಜ್ ಖಾನ್ (23) ಬಂಧಿತ ಆರೋಪಿ. ಈತನ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಐದು ಹಾಗೂ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಎನ್ಡಿಪಿಎಸ್ ಕಾಯ್ದೆಯಡಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.
ಆರೋಪಿ ಮಾದಕ ವಸ್ತುಗಳ ಸಂಗ್ರಹ, ಸಾಗಣೆ, ಸರಬರಾಜು ಮತ್ತು ಮಾರಾಟದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ. ಹಲವು ಬಾರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಮತ್ತೆ ಇದೇ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಡ್ರಗ್ಸ್ ಜಾಲದಿಂದ ಯುವಜನತೆಯ ಆರೋಗ್ಯ, ಭವಿಷ್ಯ ಹಾಗೂ ಕುಟುಂಬಗಳ ಆರ್ಥಿಕ ಸ್ಥಿತಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದಾಂಡೇಲಿ ಸಿಪಿಐ ಹಾಗೂ ಡಿಎಸ್ಪಿ ವರದಿ ಸಲ್ಲಿಸಿದ್ದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಈ ವರದಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಿಗೆ ಕಳುಹಿಸಲಾಗಿತ್ತು.
ಅದರ ಆಧಾರದ ಮೇಲೆ, ಪಶ್ಚಿಮ ವಲಯ ಐಜಿಪಿ ಅವರು The Prevention of Illicit Traffic in Narcotic Drugs and Psychotropic Substances Act–1988 ಅಡಿಯಲ್ಲಿ ಆರೋಪಿಯನ್ನು ಮುನ್ನೆಚ್ಚರಿಕಾ ಬಂಧನದಲ್ಲಿಡಲು ಆದೇಶಿಸಿದ್ದಾರೆ. ಈ ಆದೇಶದಂತೆ ಆರೋಪಿಯನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ PIT NDPS ಕಾಯ್ದೆಯಡಿ ಡ್ರಗ್ ಪೆಡ್ಲರ್ನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿರುವ ಇದು ಮೊದಲ ಪ್ರಕರಣವಾಗಿದ್ದು, ಜಿಲ್ಲೆಯನ್ನು ನಶೆಮುಕ್ತಗೊಳಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
