Mundagod| ಪಟ್ಟಣದ ಹೃದಯಭಾಗದಲ್ಲೇ ವ್ಯಕ್ತಿಯೊರ್ವನ ಮೇಲೆ ಕಾರದಪುಡಿ ಎರಚಿ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆಗೈದ ಘಟನೆ ಮುಂಡಗೋಡದಲ್ಲಿ ನಡೆದಿದೆ.
ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತನೇ ಬರ್ಭರವಾಗಿ ಕೊಲೆಯಾದ ವ್ಯಕ್ತಿ. ಈತ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್ ಗೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಊಟಕ್ಕೆ ಬಂದಿದ್ದ. ತನ್ನ ಸ್ನೇಹಿತನನ್ನು ಸಿಗರೇಟ್ ತರಲು ಹೊರಕ್ಕೆ ಕಳುಹಿಸಿದಾಗ ಏಕಾಏಕಿ ಆಗಮಿಸಿದ ನಾಲ್ಕೈದು ಜನ ಹಂತಕರು ಜಮೀರ್ ಅಹ್ಮದ್ ದರ್ಗಾವಾಲೆ ಕಣ್ಣಿಗೆ ಕಾರದಪುಡಿ ಎರಚಿ ದಾಳಿಗೆ ಮುಂದಾಗಿದ್ದಾರೆ. ಆಗ ಅಹ್ಮದ್ ತಪ್ಪಿಸಿಕೊಳ್ಳಲು ಹೋಟೆಲ್ ನ ಅಡುಗೆ ಕೊಣೆಗೆ ಓಡಿದ್ದಾನೆ. ಆದರೂ ಬಿಡದ ಹಂತಕರು ಜಮೀರ್ ಅಹ್ಮದ್ ನನ್ನು ಹಿಡಿದು ಹರಿತವಾದ ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.
ಘಟನೆ ನೋಡಿ ಹೋಟೆಲ್ ಮಾಲೀಕ ಗಾಬರಿಯಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಜಮೀರ್ ಅಹ್ಮದ್ ನನ್ನು ಮೂವತ್ತು ಲಕ್ಷ ಹಣಕ್ಕಾಗಿ ಅಪಹರಿಸಲಾಗಿತ್ತು. ಆ ಪ್ರಕರಣದಲ್ಲಿ ಸಿನಿಮೀಯ ರೀತಿಯಲ್ಲಿ ಮುಂಡಗೋಡ ಪೊಲೀಸರು ಅಪಹರಣಕಾರರನ್ನ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದರು.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ದೀಪನ್ ಎಂ.ಎನ್ ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆಗೆ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹತ್ಯೆಗೊಳಗಾದ ಜಮೀರ್ ಅಹ್ಮದ್ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ. ರೌಡಿ ಶೀಟರ್ ಸಹ ಆಗಿದ್ದ ಆತನ ಹತ್ಯೆಗೆ ಇದು ಕಾರಣವಾಯಿತೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
