Joida| ಬಾರಿ ಗಾತ್ರದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿ, ಟೋಲ್ ನಾಕಾಕ್ಕೆ ಡಿಕ್ಕಿ ಹೊಡೆದು ಅಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳಿಗೆ ಹಾನಿಯಾದ ಘಟನೆ ಅನಮೋಡ್ ತನಿಖಾ ಠಾಣೆಯಲ್ಲಿ ನಡೆದಿದೆ.

ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅನಮೋಡ್ ಪ್ರದೇಶದಲ್ಲಿ ಫಾರೆಸ್ಟ್ ಇಲಾಖೆಯಿಂದ ಅಂತರರಾಜ್ಯ ಫಾರೆಸ್ಟ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಗೋವಾದಿಂದ ಕರ್ನಾಟಕಕ್ಕೆ ಬರುವ ವಾಹನಗಳು ಹಾಗೂ ಕರ್ನಾಟಕದಿಂದ ಗೋವಾಕ್ಕೆ ತೆರಳುವ ಸಣ್ಣ ವಾಹನಗಳಿಗೆ 20ರೂ. ಮತ್ತು ಭಾರೀ ವಾಹನಗಳಿಗೆ 50ರೂ. ಶುಲ್ಕ ಫಾಸ್ಟ್ಟ್ಯಾಗ್ ಮೂಲಕ ವಸೂಲಾಗುತ್ತದೆ. ಈ ಹಣವನ್ನು ಫಾರೆಸ್ಟ್ ಇಲಾಖೆಯ ಅಭಿವೃದ್ಧಿಗಾಗಿ ಸಂಗ್ರಹಿಸಲಾಗುತ್ತದೆ.

ಆದರೆ, ಶುಕ್ರವಾರ ಹೊಸಪೇಟೆಯಿಂದ ಗೋವಾಕ್ಕೆ ಮ್ಯಾಂಗನೀಸ್ ಸಾಗಿಸುತ್ತಿದ್ದ 16 ಚಕ್ರದ ಲಾರಿ ಈ ಫಾರೆಸ್ಟ್ ಟೋಲ್ ನಾಕಾ ಗೇಟ್ ದಾಟಿದ್ದು, ಮ್ಯಾಂಗನೀಸ್ ಸಾಗಾಟ ಪರವಾನಗಿಗೆ ಸೀಲ್ ಹಾಕಲು ಚಾಲಕ ವಾಹನದಿಂದ ಇಳಿದಿದ್ದ. ಈ ವೇಳೆ ಲಾರಿ ಏಕಾಏಕಿ ಹಿಂಬದಿಗೆ ಸರಿಯಲು ಆರಂಭಿಸಿ, ಟೋಲ್ ನಾಕಾದ ಗೇಟ್, ಫಾಸ್ಟ್ಟ್ಯಾಗ್ ಯಂತ್ರ, ಸೋಲಾರ್ ಲೈಟ್ ಹಾಗೂ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಉಂಟುಮಾಡಿದೆ.
ಘಟನೆಯ ಸಮಯದಲ್ಲಿ ಅಲ್ಲಿದ್ದ ಇಬ್ಬರು ಸಿಬ್ಬಂದಿ ವಾಹನ ತಮ್ಮತ್ತ ಬರುತ್ತಿರುವುದನ್ನು ಗಮನಿಸಿ ತಕ್ಷಣವೇ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಲಾರಿ ಗಟಾರಿನಲ್ಲಿ ಸಿಲುಕಿಕೊಂಡು ನಿಂತಿದೆ.
