Karwar| ಕೈಗಾಕ್ಕೆ ಬೃಹತ್ ಗಾತ್ರದ ಯಂತ್ರೋಪಕರಣಗಳನ್ನು ಸಾಗಿಸಲು ಅನುಕೂಲವಾಗುವ ದೃಷ್ಟಿಯಿಂದ ನಗರದ ಸಿವಿಲ್‌ ಕೊರ್ಟ್‌ ರಸ್ತೆಯಲ್ಲಿನ ಬೃಹತ್‌ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಈ ರಸ್ತೆಯಲ್ಲಿ ಸಂಚರಿಸುವ ಕೈಗಾ ಅಣು ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಭಾರೀ ಲಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಭಾರೀ ಗಾತ್ರದ ಯಂತ್ರ ಹೊತ್ತು ತಂದ ಲಾರಿ ಈಗಾಗಲೇ ಕಾರವಾರ ನಗರದಿಂದ 5 km ಹಿಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಡೆತಡೆ ಇಲ್ಲದೇ ಬೃಹತ್ ಯಂತ್ರ ಹೊತ್ತುಬಂದ ಲಾರಿಗೆ ಕಾರವಾರ ನಗರ ಪ್ರದೇಶದಿಂದ ಕೈಗಾ ತಲುಪುವವರೆಗೂ ರಸ್ತೆ ಅಕ್ಕ ಅಕ್ಕದ ಮರಗಳಿರುವುದರಿಂದ ಸುಗಮ ಸಂಚಾರಕ್ಕೆ ಅಡೆತಡೆಯಾಗಿದೆ.

ಕೈಗಾದಲ್ಲಿ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರ ಪರಿಣಾಮವಾಗಿ ಭಾರೀ ಯಂತ್ರೋಪಕರಣಗಳು ಹಾಗೂ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳ ಸಂಚಾರ ದಿನೇ ದಿನೇ ಹೆಚ್ಚುತ್ತಿದೆ. ಭಾರಿ‌  ವಾಹನಗಳಲ್ಲಿ‌ ಬೃಹತ್ ಗಾತ್ರದ ಯಂತ್ರೋಪಕರಣಗಳನ್ನು ಸಾಗಿಸಲು ಏದುಸೀರು ಬಿಡುವ ಪರಿಸ್ಥಿತಿ ಇದೆ. ಇದಲ್ಲದೇ ಈ ಹೆವಿ ವಾಹನಗಳು ಸಾಗುವಾಗ ಈ ಮಾರ್ಗದಲ್ಲಿ ಸಾಗುವ ‌ವಾಹನ‌ ಸಂಚಾರಿಗರಿಗೂ ಆ ವೇಳೆ ಕಿರಿಕಿರಿಯ ಅನುಭವ.

ಭಾರೀ ವಾಹನ ಸಂಚಾರದಿಂದ ಕಾರವಾರ ನಗರದಿಂದ ಕೈಗಾ ವರಗಿನ ರಸ್ತೆಗಳು ಹಾಗೂ ಸಣ್ಣ ಸಣ್ಣ ಸೇತುವೆಗಳು ಬೇಗ ಹಾಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರವಾರ–ಕೈಗಾ ಮಾರ್ಗವನ್ನು ಅಗಲಗೊಳಿಸುವ ಅಗತ್ಯತೆಯ ಕುರಿತು ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಒತ್ತಾಯಗಳು ಕೇಳಿಬಂದಿದೆ.