Karwar| ಅಂಕೋಲಾದಲ್ಲಿ ಇತ್ತಿಚೇಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಕೊಲೆ ಯತ್ನದಲ್ಲಿ ಶಾಸಕ ಸತೀಶ ಸೈಲ್‌‌ ಪಾತ್ರ ಇದ್ದರೇ, ಅವರ ಮೇಲೆ ಪೋಲಿಸರು ಎಫ್.ಐ.ಆರ್‌ ದಾಖಲಿಸಿ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಸವಾಲು ಹಾಕಿದ್ದಾರೆ.

ಕಾರವಾರದ ಪತ್ರಿಕಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟಿ, ಗೋಪಾಲಕೃಷ್ಣ ನಾಯಕ ಅವರು ಕಾರವಾರದಲ್ಲಿ ಮಾಧ್ಯಮದೆದುರು ನೀಡಿದ್ದ, ತನ್ನ ಹತ್ಯೆ ಯತ್ನದ ಹಿಂದಿರುವವರೊಂದಿಗೆ ಶಾಸಕ ಸೈಲ್‌ ಸಂಪರ್ಕ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಕೊಲೆ ಯತ್ನದಲ್ಲಿ ಶಾಸಕ ಸತೀಶ ಸೈಲ್‌ ಅವರ ಯಾವುದೇ ಪಾತ್ರ ಇಲ್ಲ. ಒಂದೊಮ್ಮೆ ಈ ಪ್ರಯತ್ನದ ಹಿಂದೆ ಅವರ ಕೈವಾಡ ಇದ್ದರೆ ಅವರ ಮೇಲೆ ಮುಲಾಜಿಲ್ಲದೇ ಪೋಲಿಸ ಪ್ರಕರಣ ದಾಖಲಾಗಲಿ ಎಂದರು.

ಈ ಘಟನೆಯಲ್ಲಿ ಕೇವಲ ಶಾಸಕ ಸತೀಶ ಸೈಲ್‌ ಅವರ ಹೆಸರು ಹಾಳಾಗುತ್ತಿಲ್ಲ. ಬದಲಿಗೆ ಇಡೀ ಕಾಂಗ್ರೆಸ್‌ನ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ. ಗೋಪಾಲಕೃಷ್ಣ ನಾಯಕ ಅವರು ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು, ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ, ತನ್ನ ಕೊಲೆಗೆ ಸುಪಾರಿ ನೀಡಿದವರಿಗೆ ಶಾಸಕ ಸತೀಶ ಸೈಲ್‌ ಬೆಂಬಲ ನೀಡಿದ್ದಾರೆ ಎಂದು ಕೆಪಿಸಿಸಿಗೆ ದೂರು ನೀಡಲಿ ಎಂದು ಸಲಹೆ ನೀಡಿದರು.

ಇನ್ನು ಗೋಪಾಲಕೃಷ್ಣ ನಾಯಕ ಬಳಿ ಶಾಸಕ ಸೈಲ್‌ ಅವರು ಹತ್ಯಾ ಯತ್ನದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳಿದ್ದರೆ ನೇರವಾಗಿ ಪೋಲಿಸ್‌ ಅಧಿಕಾರಿಗಳಿಗೆ ನೀಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಶಾಸಕರ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಒಂದೊಮ್ಮೆ ಗೋಪಾಲಕೃಷ್ಣ ನಾಯಕ ಸುಳ್ಳು ಆರೋಪ ಮಾಡಿದ್ದರೆ ಒಬ್ಬ ಹಾಲಿ ಶಾಸಕರ ತೇಜೋವಧೆ ಹಾಗೂ ಸುಳ್ಳು ಆರೋಪ ಮಾಡಿದ ಕಾರಣ ಅವರ ಮೇಲೆ ಪೋಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಬೇಕು. ಶಾಸಕ ಸತೀಶ ಸೈಲ್‌ ಹಾಗೂ ಗೋಪಾಲಕೃಷ್ಣ ನಾಯಕ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರುವುದನ್ನು ಒಪ್ಪಿಕೊಂಡ, ಶಂಭು ಶೆಟ್ಟಿ ಆದರೆ ದ್ವೇಷ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಪಾಲಕೃಷ್ಣ ನಾಯಕರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಹೇಳಿಕೆ, ವೃಥಾ ಶಾಸಕ ಸೈಲ್‌ ಮೇಲೆ ಆರೋಪ ಇವೆಲ್ಲಕ್ಕೂ ಒಂದಕ್ಕೊಂದು ಸಂಬಂಧ ಇದೆ ಎಂದು ಹೇಳಿದ ಶಂಭು ಶೆಟ್ಟಿ, ಕಳೆದ ಚುನಾವಣೆಯ ನಂತರ ಗೋಪಾಲಕೃಷ್ಣ ನಾಯಕ ಅವರು ಟೋಲ್‌ ಗೇಟ್‌ ಬಳಿ ಸತೀಶ ಸೈಲ್‌ ಅವರ ಮುಖಾಮುಖಿಯಾದಾಗ ಚುನಾವಣೆಯಲ್ಲಿ ನಿಮಗೆ ತಾನು ಬೆಂಬಲ ನೀಡಿಲ್ಲ ಎಂದು ಗೋಪಾಲಕೃಷ್ಣ ನಾಯಕ ಸೈಲ್‌ ಅವರಿಗೆ ಹೇಳಿದ್ದರು ಎಂಬುದನ್ನು ಶೆಟ್ಟಿ ನೆನಪಿಸಿಕೊಂಡರು.

ಡಿಸಿಸಿ ಅಧ್ಯಕ್ಷ ಸಾಯಿ ಗಾಂವಕರ್‌ ಮಾತನಾಡಿ, ದ್ವೇಷಕ್ಕಿಂತ ಪ್ರೀತಿಯ ರಾಜಕಾರಣದ ಮೇಲೆ ನಂಬಿಕೆ ಹೊಂದಿದ್ದು, ಮುಂದಿನ ಕೆಲ ದಿನಗಳಲ್ಲಿ ಘಟನೆ ಹಿಂದಿರುವ ಶಕ್ತಿ, ಪರೋಕ್ಷ ಬೆಂಬಲ ಇವೆಲ್ಲವೂ ಹೊರ ಬರಲಿದೆ. ಜಿಲ್ಲಾ ಕಾಂಗ್ರೆಸ್ ನಿಂದಲೂ ಘಟನೆ ಖಂಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಶಿರೂರು ಗುಡ್ಡದ ದುರಂತದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅಂಕೋಲಾಕ್ಕೆ ಆಗಮಿಸಿದ್ದ ವೇಳೆ ಸಿಎಂ ಅವರನ್ನು ದಿಕ್ಕು ತಪ್ಪಿಸಿ ಗೋಪಾಲಕೃಷ್ಣ ನಾಯಕ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಆರೋಪಿಸಿದರು. ಮುಖ್ಯಮಂತ್ರಿಗಳಿಗೆ ಅವರದ್ದೇ ಆದ ಭದ್ರತೆ, ಪ್ರೋಟೋಕಾಲ್‌ಗಳು ಇರುತ್ತದೆ. ಇವೆಲ್ಲವನ್ನು ಅಂದು ತಪ್ಪಿಸಲಾಗಿತ್ತು. ಹೀಗಾಗಿ ಶಾಸಕ ಸತೀಶ ಸೈಲ್‌ ಅವರು ಗೋಪಾಲಕೃಷ್ಣ ಅವರ ಮನೆಯೊಳಗೆ ಹೋಗದೆ, ಸಿಎಂ ಬರುವವರೆಗೆ ಗೋಪಾಲಕೃಷ್ಣ ನಾಯಕ ಮನೆ ಗೇಟ್‌ ಬಳಿ ಕಾದಿದ್ದರು ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ಕಾರವಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಕಲಗುಟ್ಕರ್‌, ಕೃಷ್ಣ ಮೇಥಾ, ಸೀಮಾ ಪಾಟೀಲ್, ಜ್ಯೋತಿ, ದೀಪಕ ವೇರ್ಣೇಕರ್, ದಿಲ್ಶಾದ್, ಸಿದ್ದಾರ್ಥ, ನೂತನ್ ಜೈನ್ ಸೇರಿದಂತೆ ಹಲವರು ಇದ್ದರು.