Karwar| ಇಲ್ಲಿನ ಕಣಸಗಿರಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಜನ ವಸತಿ ಪ್ರದೇಶದಲ್ಲಿ ಓಡಾಡುತ್ತಾ, ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಕಣಸಗಿರಿಯ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮೇವಿಗೆ ಬಿಟ್ಟ ಜಾನುವಾರುಗಳ ಮೇಲೆ ದಾಳಿ ಹಾಗೂ ಅನೇಕ ಸಾಕಿದ ನಾಯಿಯನ್ನು ಹೊತ್ತೊಯ್ದ ಘಟನೆ ಸಹ ವರದಿಯಾಗಿತ್ತು. ಚಿರತೆಯ ಉಪಟಳದಿಂದ ಹೆದರಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು, ಚಿರತೆಯನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.

ಚಿರತೆ ಹಿಡಿಯಲು ಅರಣ್ಯ ಇಲಾಖೆಯ ತಂಡ ಅದು ಓಡಾಟ ನಡೆಸುವ ದಾರಿಯಲ್ಲಿ ಬೋನು ಇಟ್ಟಿದ್ದರು. ಈ ಬೋನಿನಲ್ಲಿ ಇಂದು ಮಂಗಳವಾರ ಬೆಳಗ್ಗಿನ ಜಾವ ಮುಂಜಾನೆ ಚಿರತೆ ಬಂಧಿಯಾಗಿದೆ. ಬೋನಿಗೆ ಬಿದ್ದ ಚಿರತೆ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೂರದ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಕಣಸಗಿರಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಮುಗಿಬಿದ್ದರು.