Karwar| ಗೋಪಾಲಕೃಷ್ಣ ನಾಯಕ ಕೊಲೆ ಯತ್ನದ ಪ್ರಕರಣ ಕುರಿತು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ದಿವ್ಯ ಮೌನ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಂಕೋಲಾದ ಕಣಕಣೇಶ್ವರ ದೇವಸ್ಥಾನದ ಎದುರು ಆರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದರು. ಘಟನೆಯಲ್ಲಿ ಗೋಪಾಲಕೃಷ್ಣ ನಾಯಕ ಅವರ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗಳಾಗಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿದ್ದಾರೆ.
ಶನಿವಾರ ಕಾರವಾರಕ್ಕೆ ಆಗಮಿಸಿದ್ದ ವೇಳೆ ಕೊಲೆ ಯತ್ನದ ಹಿಂದೆ ಇರುವ ಸಹಕಾರಿ ಕ್ಷೇತ್ರದ ದ್ವೇಷ, ಈ ದ್ವೇಷದ ಹಿಂದಿರುವ ವ್ಯಕ್ತಿಗೆ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಆತ್ಮೀಯತೆ ಹಾಗೂ ತನ್ನ ಮತ್ತು ಶಾಸಕ ಸೈಲ್ ನಡುವಿನ ರಾಜಕೀಯ ಭಿನ್ನಾಭಿಪ್ರಾಯದ ಬಗ್ಗೆ ಎಳೆಎಳೆಯಾಗಿ ಮನದ ಅಳಲನ್ನು ಮೊಟ್ಟ ಮೊದಲ ಬಾರಿಗೆ ಮಾಧ್ಯಮದ ಎದುರು ಬಿಚ್ಚಿಟ್ಟಿದ್ದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತನ್ನ ಕಾಂಗ್ರೆಸ್ ಉಮೆದುವಾರಿಕೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
ಒಟ್ಟಾರೆ ತನ್ನ ಕೊಲೆ ಯತ್ನದ ಹಿಂದೆ ಸಹಕಾರಿ ದ್ವೇಷ, ಈ ದ್ವೇಷದ ವ್ಯಕ್ತಿಯ ಹಿಂದೆ ಇರುವ ರಾಜಕೀಯ ಶಕ್ತಿಯ ಬಗ್ಗೆ ಖುಲ್ಲಂ ಖುಲ್ಲಾ ಹೇಳಿಕೆ ನೀಡಿದ್ದರು.
ಅಲ್ಲದೇ ಮಾಜಿ ಸಚಿವ ಆನಂದ ಅಸ್ನೋಟಿಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದ ಬಗ್ಗೆ ಹಾಗೂ ಸೈಲ್ ಕರೆ ಮಾಡಿಲ್ಲ. ಬಹುಶಃ ಅವರು ತಮ್ಮ ಆತ್ಮೀಯ ಪೋಲಿಸ್ ಅಧಿಕಾರಿಗಳಿಗೆ ಕರೆ ಮಾಡಿರಬಹುದು ಎಂದು ವ್ಯಂಗವಾಡಿದ್ದರು.
ಘಟನೆಯ ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಖುದ್ದಾಗಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಪಕ್ಷದ ಮುಖಂಡನ ಮೇಲೆ ಇಂತಹ ಗಂಭೀರ ಹತ್ಯೆ ಯತ್ನ ನಡೆದಿದ್ದರೂ ಜಿಲ್ಲೆಯ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕರು ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಮನೆ ಅಂಗಳದಲ್ಲೇ ಹಳ್ಳಿಯಿಂದ ದಿಲ್ಲಿ ವರೆಗಿನ ರಾಜಕಾರಣ ಟೀಕಿಸುವ ಜಿಲ್ಲಾ ಕಾಂಗ್ರೆಸ್, ಮೋದಿ, ಟ್ರಂಪ್ ಬಗ್ಗೆ ಹೋರಾಟದ ಎಚ್ಚರಿಕೆ ನೀಡುವ ಕಾಂಗ್ರೆಸ್ ತನ್ನ ಮನೆಯಂಗಳದಲ್ಲೇ, ತನ್ನದೇ ಪಕ್ಷದ ಧುರೀಣನ ಬಗ್ಗೆ ಹೇಳಿಕೆಯೂ ನೀಡಲಾರದಷ್ಟು ನಿಷ್ಕ್ರಿಯವಾಗಿದೆಯೆ ಎಂಬ ವಿಚಾರ ವಿರೋಧ ಪಕ್ಷ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಒಟ್ಟಾರೆ ‘ಕಂಡು ಕಾಣದಂತಿರು’ ಎಂಬ ಜಾಣರ ಮಾತಿಗೆ ಜಿಲ್ಲಾ ಕಾಂಗ್ರೆಸ್ ಕಟ್ಟುಬಿದ್ದಿದೆಯಾ? ಎಂಬುದು ಬಹುತೇಕರಿಂದ ಕೇಳಿ ಬರುತ್ತಿರುವ ಮಾತು.
