Haliyala: ಸರ್ಕಾರಿ ಉದ್ಯೋಗ, ಮುದ್ರಾ ಯೋಜನೆಯಡಿಯಲ್ಲಿ ಸಬ್ಸಿಡಿ ಸಾಲ ದೊರಕಿಸಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಮೋಸದ ಜಾಲವನ್ನು ಹಳಿಯಾಳ ಪೊಲೀಸರು ಬಯಲಿಗೆಳೆದಿದ್ದಾರೆ. ಉದ್ಯೋಗದ ಒದಗಿಸುವ ಆಸೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲದ ಆಮಿಷ ತೋರಿಸಿ ಮುಗ್ಧರನ್ನು ಗುರಿಯಾಗಿಸಿದ್ದ ಆರೋಪಿಗಳ ಪೈಕಿ ಮಹಿಳೆ ಜೈಲು ಸೇರಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ಪ್ರಮುಖ ಆರೋಪಿ ಮಂಜುಳಾ ಮಾದರ (40), ಈಕೆಯನ್ನು ಈಗಾಗಲೇ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣ ಇನ್ನೋರ್ವ ಆರೋಪಿ ಆಕಾಶ ಗಜಾಕೋಶ ಹಾಗೂ ಇತರ ಆರೋಪಿತರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ.
ಗರಡೊಳ್ಳಿ ಗ್ರಾಮದ ಇಸಂತ ಡಿಸೋಜಾ ಎಂಬವರ ಮಗಳು ಟ್ವೀನಿಗೆ ತಹಶೀಲ್ದಾರ ಕಚೇರಿಯಲ್ಲಿ ಡಾಟಾ ಆಪರೇಟರ್ ಹುದ್ದೆ ಖಾಲಿ ಇದೆ, ಹಣ ನೀಡಿದರೆ ನೇಮಕ ಮಾಡಿಸುವುದಾಗಿ ಆರೋಪಿಗಳು ನಂಬಿಸಿದ್ದಾರೆ. ಈ ನೆಪದಲ್ಲಿ ಫೋನ್ ಪೇ ಮೂಲಕ 1.51 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದು, ಬಳಿಕ ಮತ್ತೆ 80 ಸಾವಿರ ರೂ. ಕೇಳಿದಾಗ ಮೋಸದ ಅನುಮಾನ ಬಂದಿತ್ತು.
ಹಣ ಹಿಂತಿರುಗಿಸಲು ಕೇಳಿದರೂ ಸ್ಪಂದಿಸದೇ, ಕರೆಗಳಿಗೆ ಉತ್ತರಿಸದೇ ಆರೋಪಿತರು ಸಂಪರ್ಕ ಕಡಿತಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಸಂತ ಡಿಸೋಜಾ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ತನಿಖೆ ವೇಳೆ ಆರೋಪಿಗಳು ಇದೇ ರೀತಿಯಲ್ಲಿ ಹಲವರಿಂದ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಉದ್ಯೋಗ ಹಾಗೂ ಮುದ್ರಾ ಯೋಜನೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು, “ಸಬ್ಸಿಡಿ ಸಾಲ ಸಿಗುತ್ತದೆ” ಎಂಬ ನಂಬಿಕೆ ಹುಟ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಇವರ ಜಾಲವೇ ಇರುವ ಬಗ್ಗೆ ಬ್ಯಾಂಕ್ ವ್ಯವಹಾರಗಳಿಂದ ದೃಢಪಟ್ಟಿದೆ. ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ ಹಾಗೂ ಸಿಪಿಐ ಜಯಪಾಲ್ ಪಾಟೀಲ್ ರವರ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ಬಸವರಾಜ ಮಬನೂರ ಪಿ.ಎಸ್.ಐ (ಕಾ&ಸು) ಮತ್ತು ಕೃಷ್ಣಗೌಡ ಅರಕೇರಿ ಪಿ.ಎಸ್.ಐ (ತನಿಖೆ) ಹಳಿಯಾಳ ಪೊಲೀಸ್ ಠಾಣೆ ಇವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಅಶೋಕ ಮೋರೆ, ವಿನೋದ್ ಜಿ ಬಿ, ಮಂಜುನಾಥ ಬಾಲಿ, ಯಶೋದ ಮುನವಳ್ಳಿ ಆರೋಪಿರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
