Karwar| ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಕೊಲೆ ಯತ್ನ ಪ್ರಕರಣದ ನಾಲ್ವರು ಶಂಕಿತ ಆರೋಪಿಗಳನ್ನು ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಪೋಲಿಸರು ಬಂಧಿಸಿದ್ದಾರೆ.
ಕಾರಿನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಅವರಿಗೆ ತಲೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ರಾಡ್‌ನಲ್ಲಿ ಹೊಡೆದ ಘಟನೆ ಅಂಕೋಲಾದ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದಿತ್ತು.
ಗೋವಾ ನೊಂದಣಿಯ ಕಾರ್ GA05 D0338 ಮೇಲೆ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಗೋಪಾಲ ಕೃಷ್ಣ ನಾಯಕ ಅವರು ತಮ್ಮ ಕಾರ್ ನಿಂದ ಇಳಿದು ದೇವಸ್ಥಾನಕ್ಕೆ ಹೋಗು ವೇಳೆ ಅವರನ್ನ ಹಿಂಬಾಲಿಸಿ ಬಂದು ಚಾಕು ಇರಿದು, ರಾಡ್‌ನಲ್ಲಿ ಹೊಡೆದಿತ್ತು. ತಕ್ಷಣ ಅವರು ಸಮೀಪದಲ್ಲಿದ್ದ ಬ್ಯಾಂಕ್ ಒಂದರೊಳಗೆ ಹೋಗಿ ಬಾಗಿಲು ಹಾಕಿಕೊಂಡು, ತಮ್ಮ ಜೀವ ಉಳಿಸಿಕೊಂಡರೆನ್ನಲಾಗಿದೆ.
ಬಳಿಕ ಈ ಅಪರಿಚಿತ ದುಷ್ಕರ್ಮಿಗಳು ಪರಾರಿಯಾಗಿದ್ದರು. ಮೂಲಗಳ ಪ್ರಕಾರ, ಆರೋಪಿಗಳು ಬಿಹಾರದವರು ಎಂದೆನ್ನಲಾಗಿದ್ದು, ಸುಪಾರಿ ಪಡೆದು ಕಳೆದ ಮೂರು ದಿನಗಳಿಂದ ಅಂಕೋಲಾ ಪಟ್ಟಣದ ಹೊಟೇಲ್ ಒಂದರಲ್ಲಿ ವಾಸ್ತವ್ಯ ಇದ್ದರೆನ್ನಲಾಗಿದೆ.
ಗಾಯಗೊಂಡ ಗೋಪಾಲಕೃಷ್ಣ ನಾಯಕ ಅವರನ್ನು ಅಂಕೋಲಾದ ಅವಿನಾಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಈ ಅಪರಿಚಿತ ದುಷ್ಕರ್ಮಿಗಳ ಪತ್ತೆಗಾಗಿ ಅಂಕೋಲಾ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆರೋಪಿಗಳು ಗೋವಾಕ್ಕೆ ಪರಾರಿಯಾಗುವ ಯತ್ನದಲ್ಲಿದ್ದಾಗ, ಕಾರವಾರ ತಾಲೂಕಿನ ಮಾಜಾಳಿ ಬಳಿಯ ಕರ್ನಾಟಕ-ಗೋವಾ ಚೆಕ್ ಪೊಸ್ಟ್ ನಲ್ಲಿ ನಾಲ್ವರು ಬಿಹಾರ ಮೂಲದ ಶಂಕಿತ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
