Karwar| ‘ಲವ್ ಜಿಹಾದ್’ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರವಾರದ ಮಿರಾಜ್ ಥಿಯೇಟರ್‌ನಲ್ಲಿ ಭಜರಂಗದಳ ಕಾರವಾರ ಘಟಕದ ವತಿಯಿಂದ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಎರಡು ದಿನಗಳ ಕಾಲ ಉಚಿತ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.

ಶುಕ್ರವಾರ ಹಾಗೂ ಶನಿವಾರ ರಂದು ಸಂಜೆ 4 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ “ದ ಕೇರಳ ಸ್ಟೋರಿ – ಭಾಗ 2” ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳ ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಲಾದ ಈ ಚಿತ್ರವನ್ನು ಲಾಭದ ಉದ್ದೇಶವಿಲ್ಲದೆ, ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರದರ್ಶಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಶುಕ್ರವಾರ ರಂದು ನಡೆದ ಮೊದಲ ದಿನದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಶನಿವಾರ ಕೂಡ ಹೆಣ್ಣು ಮಕ್ಕಳು, ಮಾತೆಯರು ಹಾಗೂ ಸಹೋದರಿಯರಿಗಾಗಿ ಮತ್ತೊಮ್ಮೆ ಉಚಿತ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಹಾಗೂ ಯುವತಿಯರು ಭಾಗವಹಿಸಿ ಚಲನಚಿತ್ರವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಭಜರಂಗದಳ ತಾಲೂಕು ಸಂಯೋಜಕ ಅಮಿತ್ ಎ. ಮಾಳ್ಸೇಕರ್, ನಗರ ಸಂಯೋಜಕ ಸುನಿಲ್ ನಾಯ್ಕ್, ನಗರ ಸಹ ಸಂಯೋಜಕ ಓಂಕಾರ್ ಅಂಕೋಲೆಕರ್, ಗ್ರಾಮಾಂತರ ಸಂಯೋಜಕ ಸಾಯಿಕಿರಣ್ ನಾಗೇಕರ್, ಗ್ರಾಮಾಂತರ ಸಹ ಸಂಯೋಜಕ ವೀರೇಂದ್ರ, ಗೋರಕ್ಷಕ ಧೀರಜ್ ರಾಣೆ ಸೇರಿದಂತೆ ಉದ್ದೇಶ್, ಸಿದ್ದಾರ್ಥ್, ಸುರೇಂದ್ರ, ಓಂಕಾರ್, ಮನೋಜ್, ರಾಜೇಶ್, ಅಕ್ಷಯ್ ತಳೇಕರ್, ಪ್ರಶಾಂತ್, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.