Yellapur| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜೋಡುಕೆರೆಯ ಬಳಿ ಮೊಸಳೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಯಲ್ಲಾಪುರ ನಗರದ ಮಧ್ಯ ಭಾಗದಲ್ಲಿರುವ ಜೋಡುಕೆರೆ ಜನವಸತಿ ಪ್ರದೇಶದಲ್ಲೇ ಇರುವುದರಿಂದ ಜನರು ಭಯಭೀತರಾಗಿದ್ದಾರೆ. ಈ ಹಿಂದೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮೊಸಳೆ ಮರಿಯನ್ನು ಕೆರೆಯಲ್ಲಿ ಬಿಟ್ಟು ಹೋಗಿದ್ದರು ಎಂದು ಆರೋಪಿಸಿರುವ ಸ್ಥಳೀಯರು, ಆ ಮೊಸಳೆ ಈಗ ಬೆಳೆದು ದೊಡ್ಡದಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ಮೊಸಳೆಯನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಆದಾಗ್ಯೂ, ಇನ್ನೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೊಸಳೆ ರಾತ್ರಿ ವೇಳೆಯಲ್ಲಿ ಕೆರೆಯಿಂದ ಹೊರಬಂದು ಆಗಾಗ ಇಣುಕಿ ನೋಡುವುದು, ರಸ್ತೆಯಲ್ಲಿ ರಾಜಾರೋಷವಾಗಿ ನೈಟ್ ವಾಕ್ ಮಾಡುತ್ತಿದೆ. ಇದರಿಂದ ಯಲ್ಲಾಪುರ-ಹಳಿಯಾಳ ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಭಯದ ನಡುವೆ ಪ್ರಯಾಣ ಮಾಡುವಂತಾಗಿದೆ.
ಜನಸಾಮಾನ್ಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮೊಸಳೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
