Honavar| ತಾಲೂಕಿನ ಚಂದಾವರ ಗ್ರಾಮದ ನಾಗರಬೇಣ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ಹೊನ್ನಾವರ ಪೊಲೀಸರ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಹಲವರು ಪರಾರಿಯಾಗಿದ್ದಾರೆ.
ನವೀಲಗೋಣದ ಗಣೇಶ ಗೋಳಿ ಗೌಡ (39) ಮತ್ತು ಕುಮಟಾದ ನವೀನ ನಾರಾಯಣ ಗೌಡ (30) ಎಂಬ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ, ನಾಗರಾಜ ಮಾಸ್ತಿ ಪಟಗಾರ, ಈಶ್ವರ ಚಂದ್ರು ಉಪ್ಪಾರ, ದರ್ಶನ ರಾಜು ಅಂಬಿಗ ಕುಮಾಟ, ಮಂಜುನಾಥ ತಿಮ್ಮಣ್ಣ ಅಂಬಿಗ, ಮಣಿಕಂಠ ತಿಮ್ಮಣ್ಣ ಅಂಬಿಗ, ವಿನಾಯಕ ಮುಕ್ರಿ ಸೇರಿದಂತೆ ಹಲವರು ಪೋಲಿಸರ ದಾಳಿಯ ವೇಳೆ ಓಡಿ ಹೋಗಿದ್ದಾರೆ.
ಹೊನ್ನಾವರದ ಚಂದಾವರದ ನಾಗರಬೇಣದ ರಸ್ತೆಯ ಬಳಿ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು, ಹಣವನ್ನು ಪಂಥಕ್ಕೆ ಕಟ್ಟಿ ಕೋಳಿ ಅಂಕ ಆಡುತ್ತಿದ್ದರು. ಆ ವೇಳೆ ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಎಸ್. ನೇತೃತ್ವದಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸ್ಥಳದಿಂದ ₹9,780 ನಗದು, ಕೋಳಿ ಹುಂಜಗಳು, ಕೋಳಿಕತ್ತಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರೊಂದಿಗೆ ವಿವಿಧ ಬೈಕ್ಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದು, ಅವುಗಳ ಒಟ್ಟು ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾಗಿರುವ ಆರೋಪಿತರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
