Karwar| ಹೊನ್ನಾವರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಆದರೆ ಅದು ತನ್ನ ಸಮಾದಿಯ ಮೇಲೆ ಎಂದು ಬಂಗಾರಮಕ್ಕಿ ವೀರಾಂಜನೇಯ ಸಂಸ್ಥಾನದ ಸ್ವಾಮೀಜಿ ಮಾರುತಿ ಗುರೂಜಿ ಎಚ್ಚರಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಇಡೀ ಪಶ್ಚಿಮ ಘಟ್ಟದಲ್ಲಿನ ಅಪರೂಪದ ಜೀವ ವೈವಿಧ್ಯತೆ ನಾಶವಾಗಲಿದೆ. ಅಳಿವಿನಂಚಿನಲ್ಲಿರುವ ಸಿಂಹ‌ಬಾಲದ‌ ಸಿಂಗಳೀಕ, ಕೆಂದಳಿಲು, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿಗಳು, ಅಪರೂಪದ ಔಷಧೀಯ ‌ಸಸ್ಯಗಳು‌ ನಾಶವಾಗಲಿದೆ. ಇದು ವನ್ಯ ಜೀವಿ ಕಾಯಿದೆ 1972 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

ಇನ್ನು ಈ ಯೋಜನೆಗಾಗಿ‌18 ಸಾವಿರ ಟನ್ ಸ್ಫೋಟಕಗಳನ್ನು ಬಳಸಿ‌ ಭೂಗತ ಬಂಡೆಗಳನ್ನು ಒಡೆದು ಸುರಂಗ ಮಾರ್ಗ ಕೊರೆಯಲಾಗುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಪರಿಸರ‌ ನಾಶವಾಗಲಿದೆ‌ ಎಂದು ಆತಂಕ ವ್ಯಕ್ತಪಡಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಟಾನ ಪ್ರದೇಶವು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುತ್ತದೆ. ಪಶ್ವಿಮ ಘಟ್ಟಗಳನ್ನು ಯುನೆಸ್ಕೋ (UNESCO) ಪಾರಂಪರಿಕ ತಾಣ ಎಂದು ಘೋಷಿಸಿದೆ.

ಇನ್ನು ಪಂಪ್ಡ್ ಸ್ಟೋರೇಜ್ ನಿರ್ಮಾಣ ಯೋಜನೆಯ ವಿವರವನ್ನು ಯುನೆಸ್ಕೋ ಗಮನಕ್ಕೆ ತಂದಿದ್ದೆವು. ಯುನೆಸ್ಕೋ ಸರ್ಕಾರಕ್ಕೆ ಕೆಲ ಸ್ಪ‌ಷ್ಟ ನಿರ್ದೇಶನ ನೀಡಿದೆ. ಪಶ್ವಿಘಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡುವಾಗ ಈ ಬಗ್ಗೆ ತನ್ನ ಗಮನಕ್ಕೆ ತರಬೇಕು ಎಂಬ  ನಿರ್ದೇಶನ ಯುನೆಸ್ಕೋ ನೀಡಿದೆ ಎಂದ ಮಾರುತಿ ಗುರೂಜೀ, ಈ ಯುನೆಸ್ಕೋ ಪಶ್ಚಿಮಘಟ್ಟ ರಕ್ಷಣೆಗಾಗಿ ಕಳೆದ 10 ವರ್ಷದಲ್ಲಿ 8.16 ಬಿಲಿಯನ್ (12 ಸಾವಿರ ಕೋಟಿ) ವಿನಿಯೋಗಿಸಿದೆ. ಹೀಗಾಗಿ ಪಶ್ಚಿಮಘಟ್ಟದ ಬಗ್ಗೆ ಯುನೆಸ್ಕೋ ಕಾಳಜಿ‌ಹೊಂದಿದೆ ಎಂದರು.

ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗುವ ಅನಾಹುತ‌ಗಳನ್ನು ಮನಗೊಂಡು  ಜಗತ್ತಿನ ನಂ.1 ದೇಶವಾದ ಅಮೇರಿಕಾವೇ ತನ್ನಲ್ಲಿರುವ ಎಲ್ಲಾ ಈ ಪಂಪ್ಡ್ ಸ್ಟೋರೇಜ್ ವಿದ್ಯುತ್ ಘಟಕಗಳನ್ನು ಬಂದ್ ಮಾಡುತ್ತಿದೆ ಎಂದು‌ ಗುರೂಜೀ ಹೇಳಿದರು.

ಏನೇ ಆದರೂ ಈ ಜನ‌ವಿರೋಧಿ, ಪರಿಸರ ಹಾಗೂ ಜೀವ ವೈವಿಧ್ಯತೆಗಳಿಗೆ ಮಾರಕವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜನ‌ಹೋರಾಟದ ಮೂಲಕ ಓಡಿಸುತ್ತೇವೆ.

ಇದರ ಹೊರತಾಗಿಯೂ ಒಂದೊಮ್ಮೆ ಯೋಜನೆ ಆದರೆ, ಅದು ತನ್ನ ಸಮಾದಿ ಮೇಲೆಯೇ ಎಂದ ಅವರು,  ಯೋಜನೆ ಆರಂಭಗೊಂಡ ಆ ಕ್ಷಣದಲ್ಲಿ ತಾನು ಇರಲ್ಲ ಎಂದ ಮಾರುತಿ ಗುರೂಜಿ ಎಚ್ಚರಿಸಿದರು.