ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಶನಿವಾರ ಸಂಜೆಯಿಂದ ಏಕಾಏಕಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ‌ ಸುರಿಯುತ್ತಿದೆ. ದಿನಪೂರ್ತಿ ಉಷ್ಣತೆಯಿಂದ ಕಂಗೆಟ್ಟಿದ್ದ ಜನರಿಗೆ ಆಲಿಕಲ್ಲು ಮಳೆ ತಂಪು ತಂದರೂ, ಕೆಲ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನರು ಸಂಕಷ್ಟ ಅನುಭವಿಸುವಂತಾಯಿತು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ರಸ್ತೆಗಳು ನೀರಿನಿಂದ ತುಂಬಿಕೊಂಡವು. ವಿಶೇಷವಾಗಿ ತಗ್ಗು ಪ್ರದೇಶಗಳ ಮನೆಗಳ ಮುಂಭಾಗ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೂ ಅಡಚಣೆ ಉಂಟಾಯಿತು.

ಕೆಲವೆಡೆ ವಾಹನ ಸವಾರರು ನೀರಿನ ಮಧ್ಯೆ ಸಾಗಲು ಹರಸಾಹಸ ಪಟ್ಟರು. ಅಕಸ್ಮಾತ್ ಸುರಿದ ಮಳೆಯಿಂದ ಜನರಿಗೆ ಬಿಸಿಲಿನಿಂದ ಸ್ವಲ್ಪ ನೆಮ್ಮದಿ ದೊರೆತರೂ, ಮಳೆ ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನಗರ ಪಾಲಿಕೆ ಮಳೆ ನೀರು ಹರಿಯುವ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆಯ ಪರಿಣಾಮದಿಂದ ಕೆಲ ಕಾಲ ನಗರದ ಸಂಚಾರ ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾದ ವರದಿಯಾಗಿದೆ.