ಕಾರವಾರ: ಕಾರವಾರ ಸಮುದ್ರದಲ್ಲಿ ಸಾಂಪ್ರದಾಯಿಕ ಏಂಡಿ ಬಲೆ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರಿಗೆ ಬುಧವಾರ ಭರ್ಜರಿ ಯಶಸ್ಸು ದೊರೆತಿದೆ. ಸಮುದ್ರದಲ್ಲಿ ಹಾಕಿದ್ದ ಏಂಡಿ ಬಲೆಗೆ ಒಂದೇ ಬಾರಿಗೆ ಅಪಾರ ಪ್ರಮಾಣದ ಮೀನುಗಳು ಸಿಕ್ಕಿದ್ದು, ಮೀನುಗಾರರಲ್ಲಿ ಸಂತಸ ಮನೆಮಾಡಿದೆ.
ಬೆಳಗಿನ ಜಾವ ಬಲೆ ಹಾಕಿದ ಮೀನುಗಾರರು ಬಳಿಕ ಅದನ್ನು ತೀರಕ್ಕೆ ಎಳೆಯುವ ವೇಳೆ ಮೀನುಗಳ ಭಾರದಿಂದ ಬಲೆ ತುಂಬಿ ತುಳುಕಿತು. ಬಲೆಯನ್ನು ತೀರಕ್ಕೆ ಎಳೆಯಲು ಹಲವು ಮೀನುಗಾರರು ಒಗ್ಗಟ್ಟಿನಿಂದ ಶ್ರಮಿಸಿದ ದೃಶ್ಯ ಗಮನಸೆಳೆಯಿತು.

ತೀರಕ್ಕೆ ಬಂದ ಅಪಾರ ಪ್ರಮಾಣದ ಮೀನುಗಳನ್ನು ನೋಡಲು ಸ್ಥಳೀಯರು ಹಾಗೂ ಪ್ರವಾಸಿಗರು ಜಮಾಯಿಸಿದ್ದು, ಸಮುದ್ರ ತೀರದಲ್ಲಿ ಕೆಲಕಾಲ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ಸಂಕಷ್ಟ ಎದುರಿಸುತ್ತಿದ್ದ ಮೀನುಗಾರರಿಗೆ ಈ ಬಾರಿ ಉತ್ತಮ ಪ್ರಮಾಣದಲ್ಲಿ ಮೀನು ಸಿಕ್ಕಿರುವುದು ಆಶಾಕಿರಣ ಮೂಡಿಸಿದೆ. ಸಿಕ್ಕ ಮೀನುಗಳನ್ನು ಸ್ಥಳೀಯ ಮಾರುಕಟ್ಟೆಗಳಿಗೆ ವ್ಯವಸ್ಥೆ ಮಾಡಲಾಯಿತು.
ಅನುಕೂಲಕರ ಹವಾಮಾನ ಮತ್ತು ಸಮುದ್ರದ ಪರಿಸ್ಥಿತಿಯಿಂದ ಸಾಂಪ್ರದಾಯಿಕ ಏಂಡಿ ಬಲೆ ಮೀನುಗಾರಿಕೆಗೆ ಉತ್ತಮ ಫಲಿತಾಂಶ ದೊರೆತಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿಯ ಉತ್ತಮ ಮೀನುಗಾರಿಕೆ ಮುಂದುವರಿಯಲಿ ಎಂಬ ಆಶಯವನ್ನು ಮೀನುಗಾರರು ವ್ಯಕ್ತಪಡಿಸಿದರು.

