ಎರಡನೇ ಬಾರಿಗೆ ಕ್ಷೇತ್ರದ ಜನರು ತಮ್ಮ ಕೆಲಸ ಮಾಡಲಿ ಎಂದು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮಂತ್ರಿಯಾಗುವ ಆಸೆಯಿದೆ, ಆದರೆ ನಾನು ಮಂತ್ರಿಯಾಗಲಿ ಎಂದು ನನ್ನ ಸ್ನೇಹಿತರಾಗಲಿ ಕ್ಷೇತ್ರದ ಜನರಾಗಲಿ ಒತ್ತಡ ಹೇರುತ್ತಿಲ್ಲ. ಹಾಗಾಗಿ ಸರ್ಕಾರ ಮತ್ತು ಹೈಕಮಾಂಡ ಗಮನಕ್ಕೆ ಬರುತ್ತಿಲ್ಲ. ನಾನು ಮಂತ್ರಿಯಾಗುವುದು ನನ್ನ ಅಕ್ಕಪಕ್ಕದಲ್ಲಿರುವವರಿಗೂ ಇಷ್ಟವಿಲ್ಲ ಎಂದು ಶಾಸಕ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು ” ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಒಂದೊಮ್ಮೆ ಮಂತ್ರಿಮಂಡಲ ವಿಸ್ತರಣೆ ಆದಲ್ಲಿ ಮಂತ್ರಿಸ್ಥಾನ ಸಿಗಬಹದು ಎಂಬ ನಿರೀಕ್ಷೆಯಲ್ಲಿದ್ದೇನೆ. ನಾನು ಮಂತ್ರಿಯಾಗುವುದು ದೇವರಿಗೆ ಬಿಟ್ಟಿದ್ದು. ನನಗೆ ದೇವರು ಬೇರೆ ಅಲ್ಲ, ಹೈಕಮಾಂಡ ಬೇರೆ ಅಲ್ಲ” ಎಂದರು.
” ನನನ್ನು ರಾಜಕೀಯವಾಗಿ ಕ್ಷೇತ್ರದ ಜನ ಬೆಳೆಸಿದ್ದಾರೆ. ಆದರೆ ಜಿಲ್ಲೆಯ ಕೆಲ ಹಿರಿಯ ನಾಯಕರು ನನ್ನ ಬೆಳವಣಿಗೆ ಸಹಿಸುತ್ತಿಲ್ಲ. ಸತೀಶ್ ಸೈಲ್ ಗೂ ಅರ್ಹತೆ ಇದೆ. ಅವರಿಗೂ ಒಮ್ಮೆ ರಾಜ್ಯದ ಜನತೆಯ ಕೆಲಸ ಮಾಡುವ ಅವಕಾಶ ನೀಡಿ ಎಂದು ಪಕ್ಷದ ಹಿರಿಯ ನಾಯಕರು ಹೈಕಮಾಂಡ್ ಮೇಲೆ ಒತ್ತಡ ತರಬಹುದಿತ್ತು. ಆದರೆ ಆ ಪ್ರಯತ್ನವಾಗಿಲ್ಲ ಬದಲಾಗಿ ಆ ಹಿರಿಯ ನಾಯಕರು ನನ್ನ ರಾಜಕೀಯ ಬೆಳವಣಿಗೆಯನ್ನೇ ಸಹಿಸುತ್ತಿಲ್ಲ ” ಎಂದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ” ನಾನು ಮಂತ್ರಿಯಾಗುವುದನ್ನು ನನ್ನ ಅಕ್ಕ ಪಕ್ಕ ಇದ್ದವರೇ ಸಹಿಸುವಂತೆ ಕಾಣಿತ್ತಿಲ್ಲ ಎಂದು ಪತ್ರಿಕಾಗೋಷ್ಠಿಯ ಪಕ್ಕದಲ್ಲಿ ಕುಳಿತಿದ್ದ ಸೈಲ್ ಆಪ್ತ ಶಂಭು ಶೆಟ್ಟಿ ಹಾಗೂ ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ರನ್ನೇ ಪ್ರಶ್ನಿಸಿದರು.
ಶಾಸಕರ ಪ್ರಶ್ನೆಗೆ ಕಸಿವಿಸಿಗೊಂಡ ಸೈಲ್ ಆಪ್ತ ಶಂಭು ಶೆಟ್ಟಿ ಅವರು ” ನಮ್ಮ ಸಾಹೇಬ್ರು ಮಂತ್ರಿಯಾಗಬೇಕು ಎಂದು ಎಲ್ಲಿ ಒತ್ತಡ ಹಾಕಬೇಕೊ ಅಲ್ಲಿ ಒತ್ತಡ ಹಾಕಿದ್ದೇವೆ. ಎಲ್ಲವನ್ನು ಮಾಧ್ಯಮದವರ ಎದುರು ಹೇಳಲು ಸಾಧ್ಯವಿಲ್ಲ ” ಎಂದರು.
ಅಂತಿಮವಾಗಿ ಶಾಸಕ ಸೈಲ್ ಅವರು ” ಮಂತ್ರಿಪಟ್ಟ ಸಿಗುವುದು ದೇವರಿಗೆ ಬಿಟ್ಟ ವಿಚಾರ. ನನ್ನನ್ನು ಮಂತ್ರಿ ಮಾಡಿ ಎಂದು ಹೈಕಮಾಂಡ್ ಮೇಲೆ ಒತ್ತದ ಹಾಕಲು ಯಾರ ದುಂಬಾಲು ಬೀಳುವುದಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ಕ್ಷೇತ್ರದ ಜನರು ತಮ್ಮ ಕೆಲಸಕ್ಕಾಗಿ ನನ್ನ ಆಯ್ಕೆ ಮಾಡಿದ್ದಾರೆ, ಈ ಕೆಲಸದಲ್ಲಿ ನನಗೆ ಸಮಾಧಾನವಿದೆ. ಕ್ಷೇತ್ರ ಅಭಿವೃದ್ಧಿಯಾದರೆ ನಾನು ಮುಖ್ಯಮಂತ್ರಿ ಆದಷ್ಟೇ ಖುಷಿ” ಎಂದರು.
