ಕಾರವಾರ/ಹೊನ್ನಾವರ: ಹೊನ್ನಾವರ ತಾಲೂಕಿನ ಟೊಂಕಾ ಕಾಸರಕೊಡ ನಿವಾಸಿಯಾದ ಮೇಹಕ್ ಘನಿ ಮುಲ್ಲಾ (20) ಅವಳು ಕಳೆದ ಜುಲೈ 20ರಂದು ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಹೊನ್ನಾವರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಕುಟುಂಬದವರು ಹಾಗೂ ಪೊಲೀಸರು ನಡೆಸಿದ ಪ್ರಾಥಮಿಕ ಹುಡುಕಾಟದ ಹೊರತಾಗಿಯೂ ಯುವತಿಯ ಸುಳಿವು ಸಿಕ್ಕಿಲ್ಲ. ಇದರಿಂದ ಕುಟುಂಬದ ಆತಂಕ ಹೆಚ್ಚಿದ್ದು, ಪೊಲೀಸರು ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯಂತೆ, ಮೇಹಕ್ ದುಂಡು ಮುಖ, ಬಿಳಿ ಮೈಬಣ್ಣ, ತೆಳ್ಳಗಿನ ಮೈಕಟ್ಟು ಹೊಂದಿದ್ದು, ಸುಮಾರು 4.9 ಅಡಿ ಎತ್ತರ ಇದ್ದಾಳೆ. ಅವಳು ಉರ್ದು ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೊರಡುವ ವೇಳೆ ಕಾಫಿ ಬಣ್ಣದ ಟಾಪ್ ಹಾಗೂ ಪ್ಯಾಂಟ್ ಧರಿಸಿದ್ದಳು ಎಂದು ತಿಳಿದುಬಂದಿದೆ.
ಯುವತಿ ಎಲ್ಲಿಯಾದರೂ ಕಂಡುಬಂದರೆ ಅಥವಾ ಅವಳ ಬಗ್ಗೆ ಯಾವುದೇ ಮಾಹಿತಿ ತಿಳಿದಿದ್ದರೆ, ಕೂಡಲೇ ಹೊನ್ನಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಸಾರ್ವಜನಿಕರ ಒಂದು ಮಾಹಿತಿ ಆತಂಕದಲ್ಲಿರುವ ಕುಟುಂಬಕ್ಕೆ ನೆಮ್ಮದಿ ತರಬಹುದು.
