ಕಾರವಾರ: ಭಾರತೀಯ ನೌಕಾಪಡೆಗೆ ‘ಐಎನ್‌ಎಸ್ ಮಾಲ್ವಣ್’ ಸೇರ್ಪಡೆಯಿಂದ ದೇಶದ ಕರಾವಳಿ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹೇಳಿದರು.

ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವ ಮಹತ್ವದ ಹೆಜ್ಜೆಯಾಗಿ ಮಾಹೆ ವರ್ಗದ (Mahe-class) ಎರಡನೇ ಆಂಟಿ-ಸಬ್‌ಮರಿನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ‘ಐಎನ್‌ಎಸ್ ಮಾಲ್ವಣ್’ ಯುದ್ಧನೌಕೆಯನ್ನು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಬುಧವಾರ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಿ ಅವರು ಮಾತನಾಡಿದರು.
ಐಎನ್‌ಎಸ್ ಮಾಲ್ವಣ್ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಕರಾವಳಿ ಕಣ್ಗಾವಲು, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ ಹಾಗೂ ಸಮುದ್ರ ಭದ್ರತಾ ಸಾಮರ್ಥ್ಯ ಮತ್ತಷ್ಟು ಬಲಿಷ್ಠವಾಗಲಿದೆ. ಸ್ವದೇಶಿ ಯುದ್ಧನೌಕೆ ನಿರ್ಮಾಣ ಕ್ಷೇತ್ರದಲ್ಲಿನ ಭಾರತದ ಸಾಧನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದರು. ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಯಲ್ಲಿ ಮೂರು ಸೇನಾ ಪಡೆಗಳ ನಡುವಿನ ಸಮನ್ವಯ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್ ಮಾತನಾಡಿ, ಕರ್ನಾಟಕದ ಕಾರವಾರದ ನೌಕಾನೆಲೆಯಲ್ಲಿ ಮೊಟ್ಟಮೊದಲ ಬಾರಿಗೆ ಯುದ್ದ ನೌಕೆ ಲೋಕಾರ್ಪಣೆ ಗೊಳ್ಳುತ್ತಿದೆ. ಐಎನ್ಎಸ್ ಮಾಲ್ವಣ ಆತ್ಮ ನಿರ್ಭರ ಭಾರತಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.
ಐಎನ್ಎಸ್ ಮಾಲ್ವಾಣ ಯುದ್ದ ನೌಕೆಯ ಕಮಾಂಡರ್ ಚೀಪ್ ಆಫೀಸರ್ ಪ್ತವೀಣಕುಮಾರ್ ತಿವಾರಿ, ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್ ವ್ಯವಸ್ಥಾಪಕ ಜೋಸ್ ವಿಜೆ ಸೇರಿದಂತೆ ಹಿರಿಯ ನೌಕಾಪಡೆ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ಹಾಗೂ ರಕ್ಷಣಾ ಉದ್ಯಮ ವಲಯದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಐಎನ್ಎಸ್ ಮಾಲ್ವಣ್ ಬಗ್ಗೆ’; ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿರುವ ಐಎನ್‌ಎಸ್ ಮಾಲ್ವಣ್, ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಅಭಿಯಾನದಡಿ ಸ್ವದೇಶಿ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಈ ನೌಕೆಯಲ್ಲಿ ಶೇ.80ಕ್ಕೂ ಅಧಿಕ ಸ್ವದೇಶಿ ಉಪಕರಣಗಳನ್ನು ಅಳವಡಿಸಲಾಗಿದ್ದು, ಹಲವು ಭಾರತೀಯ ರಕ್ಷಣಾ ಕಂಪನಿಗಳು ಹಾಗೂ ಎಂಎಸ್‌ಎಂಇ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಿಸಲಾಗಿದೆ.
78.8 ಮೀಟರ್ ಉದ್ದ, 1,150 ಟನ್ ತೂಕ ಹೊಂದಿರುವ ಈ ಯುದ್ಧನೌಕೆ ಮೂರು ಡೀಸೆಲ್ ಎಂಜಿನ್‌ಗಳ ವಾಟರ್-ಜೆಟ್ ಪ್ರೊಪಲ್ಷನ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತದೆ. ಚುರುಕುತನ, ವೇಗದ ಚಲನೆ ಹಾಗೂ ಕಡಿಮೆ ಶಬ್ದ ಹೊರಸೂಸುವ ತಂತ್ರಜ್ಞಾನ ಹೊಂದಿರುವ ಕಾರಣ ಕರಾವಳಿ ಪ್ರದೇಶಗಳಲ್ಲಿನ ಜಲಾಂತರ್ಗಾಮಿ ನೌಕೆಗಳ ವಿರುದ್ಧದ ಕಾರ್ಯಾಚರಣೆಗೆ ಇದು ಅತ್ಯಂತ ಪರಿಣಾಮಕಾರಿಯಾಗಿದೆ.
ನೌಕೆಯಲ್ಲಿ 30 ಎಂಎಂ ನೇವಲ್ ಸಪೋರ್ಟ್ ಗನ್, ಲೈಟ್‌ವೇಟ್ ಟಾರ್ಪಿಡೊ ಲಾಂಚರ್‌ಗಳು, ಸ್ವದೇಶಿ ರಾಕೆಟ್ ಲಾಂಚರ್‌ಗಳು, ‘ಅಭಯ್’ ಹಲ್-ಮೌಂಟೆಡ್ ಸೋನಾರ್ ಹಾಗೂ ‘ಮರೀಚ್’ ಟಾರ್ಪಿಡೊ ಡಿಕಾಯ್ ವ್ಯವಸ್ಥೆ ಅಳವಡಿಸಲಾಗಿದೆ. ಬಿಇಎಲ್ (BEL) ಮತ್ತು WESEE ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಾಂಬಾಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಶಸ್ತ್ರಾಸ್ತ್ರ ಹಾಗೂ ಸಂವೇದಕಗಳ ಸಮನ್ವಯ ಸಾಧಿಸಿ ಕ್ಷಿಪ್ರ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ‘ವರುಣ’ (ESM) ಹಾಗೂ ‘ನಯನ್’ (COMINT) ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳನ್ನೂ ಹೊಂದಿದೆ.
ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ಮಾಲ್ವಣ್ ಹೆಸರನ್ನು ಈ ನೌಕೆಗೆ ಇಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಸಮುದ್ರ ಪರಂಪರೆಗೆ ಗೌರವ ಸಲ್ಲಿಸಲಾಗಿದೆ. ನೌಕೆಯ ಚಿಹ್ನೆಯಲ್ಲಿ ‘ಬಾಘ್ ನಖ್’ (ಹುಲಿಯ ಉಗುರು) ಅಳವಡಿಸಲಾಗಿದ್ದು, ಅದು ಧೈರ್ಯ, ಚುರುಕುತನ ಮತ್ತು ಗುಪ್ತ ಕಾರ್ಯಾಚರಣೆಯ ಸಂಕೇತವಾಗಿದೆ.
