ಬನವಾಸಿ: ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವಸ್ಥಾನದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಾಸಿಗೆ ಒಂದರಂತೆ ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸುವಂತೆ ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ಮನವಿ ಸಲ್ಲಿಸಿದ್ದು, ಈ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳು ಸಕಾರಾತ್ಮಕ ಭರವಸೆ ನೀಡಿದ್ದಾರೆ.
ಬುಧವಾರ ಶಿರಸಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ಸಂಚಾರಾಧಿಕಾರಿ (ಡಿ.ಟಿ.ಒ.) ಆರ್. ಎಲ್. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ಪದಾಧಿಕಾರಿಗಳು, ಬನವಾಸಿಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಮಧುಕೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಹೆಚ್ಚಿನ ಬಸ್‌ಗಳು ದೇವಸ್ಥಾನದವರೆಗೆ ಸಂಚರಿಸದ ಕಾರಣ ಸಾರ್ವಜನಿಕರು ಮತ್ತು ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.ತಾಸಿಗೆ ಕನಿಷ್ಠ ಒಂದು ಬಸ್ ಆದರೂ ದೇವಸ್ಥಾನದವರೆಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ಗುರುವಾರ ಅಥವಾ ಶುಕ್ರವಾರದಿಂದಲೇ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಮಿತಿ ಮನವಿ ಮಾಡಿತು.
ಮನವಿಗೆ ಸ್ಪಂದಿಸಿದ ವಿಭಾಗೀಯ ಸಂಚಾರಾಧಿಕಾರಿ ಆರ್. ಎಲ್. ಕುಮಾರಸ್ವಾಮಿ, ‘ಈ ಕುರಿತು ಕೂಡಲೇ ಅಗತ್ಯ ಚರ್ಚೆ ನಡೆಸಿ, ಮಧುಕೇಶ್ವರ ದೇವಸ್ಥಾನದವರೆಗೆ ಬಸ್‌ಗಳನ್ನು ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥಾಪಕ ಪ್ರವೀಣ ಎನ್. ಶೇಟ್ ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಗೌರವಾಧ್ಯಕ್ಷ ಸಿ. ಎಫ್. ನಾಯ್ಕ ಮಾಳಂಜಿ, ಕಾರ್ಯದರ್ಶಿ ವಿಶ್ವನಾಥ್ ಓಡೆಯರ್, ಸಾಮಾಜಿಕ ಮುಖಂಡ ಸಾಯಿರಾಮ ಕಾನಳ್ಳಿ ಹಾಗೂ ಸುದರ್ಶನ ರಾಯ್ಕರ್ ಸೇರಿದಂತೆ ನಿಯೋಗದ ಸದಸ್ಯರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿಗೆ ತಕ್ಷಣ ಸ್ಪಂದಿಸಿ ಸಕಾರಾತ್ಮಕ ಭರವಸೆ ನೀಡಿದ ಸಾರಿಗೆ ಇಲಾಖೆಯ ಅಧಿಕಾರಿಗಳ ನಡೆಗೆ ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದೆ. ದೇವಸ್ಥಾನದವರೆಗೆ ಬಸ್ ಸಂಚಾರ ಆರಂಭವಾದರೆ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಸಮಿತಿ ವ್ಯಕ್ತಪಡಿಸಿದೆ.
