Karwar|Vande Matharam Coastal Cyclothon-2026 ದೇಶದ ಕರಾವಳಿ ತೀರದ ಪ್ರದೇಶ ಸುರಕ್ಷಿತವಾಗಿರುವವರೆಗೆ ದೇಶ ಸುರಕ್ಷಿತವಾಗಿ, ಸಮೃದ್ಧವಾಗಿರುತ್ತದೆ ಎಂದು ಸಿಐಎಸ್ಎಫ್ ಅಧಿಕಾರಿ ರಾಹುಲ್ ಹೇಳಿದರು.
ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026 ರ‍್ಯಾಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡ ಇಂದು ಸೋಮವಾರ ಕಾರವಾರ ಪ್ರವೇಶಿಸಿದ್ದು, ಈ ರ‍್ಯಾಲಿಗೆ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು.

ಗುಜರಾತನಿಂದ ಪ್ರಾರಂಭವಾದ ನಮ್ಮ ರ‍್ಯಾಲಿಯು ಕೇರಳದ ಕೊಚ್ಚಿ ತನಕ ನಡೆಯಲಿದೆ. ಈ ರ‍್ಯಾಲಿಯ ಮುಖ್ಯ ಉದ್ದೇಶ ಸುರಕ್ಷಿತ ಸಮೃದ್ಧ ಭಾರತ. ದೇಶದ ಮೀನುಗಾರರು ಸಹಕಾರ ಮಹತ್ವದಾಗಿದ್ದು, ಪ್ರತಿ ಕ್ಷಣ ಅವರು ಸಮುದ್ರದಲ್ಲಿ ಇರುವುದರಿಂದ ಕರಾವಳಿ ತೀರ ಪ್ರದೇಶದ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದ್ದು, ಅವರ ಜೊತೆ ಬೆರೆತು ದೇಶದ ಭದ್ರತೆಗೆ ಅವರ ಸಹಕಾರ ಪಡೆಯಲು ಸೈಕ್ಲೋಥಾನ್ ಆಯೋಜಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ದೇಶದ ಪ್ರಮುಖ ನಿರ್ಣಾಯಕ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದರು.
ಈ ರ‍್ಯಾಲಿಯಲ್ಲಿ ಸುಮಾರು 50 ರಷ್ಟು ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 120 ಸಿ.ಐ.ಎಸ್.ಎಫ್ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
ಈ ತಂಡವು ಜ.28 ರಂದು ಗುಜರಾತ್‌ನ ಲಖ್‌ಪತ್ ಕೋಟೆಯಿಂದ ರ‍್ಯಾಲಿಯನ್ನು ಪ್ರಾರಂಭಿಸಿದೆ. ಸೋಮವಾರ ಮಡಗಾಂವ್ – ಕಾಣಕೋಣ – ಮಾಜಾಳಿ ಮೂಲಕ ಕಾರವಾರ ಪ್ರವೇಶಿಸಿದೆ.
ಈ ಸಂದರ್ಭದಲ್ಲಿ ಸಿ.ಎಸ್.ಎಸ್.ಎಫ್. ಕೈಗಾದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು, ಪೊಲೀಸ್ ಬ್ಯಾಂಡ್ ಮತ್ತು ಸ್ಥಳೀಯ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು.
ಸೈಕ್ಲೋಥಾನ್ ತಂಡದಲ್ಲಿದ್ದ ಸಿ.ಐ.ಎಸ್.ಎಫ್ ಸಿಬ್ಬಂದಿಯನ್ನು ಗೋಟ್ನೆಭಾಗ್ ಕ್ರಾಸ್‌ನಲ್ಲಿ ಮೀನುಗಾರ ಮಹಿಳೆಯರು ತಿಲಕವಿಟ್ಟು, ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.
ಸಿ.ಐ.ಎಸ್.ಎಫ್. ಘಟಕ ಎನ್.ಪಿ.ಸಿ. ಕೈಗಾದ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ್, ಡಿವೈಎಸ್ಪಿ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.
ನಂತರ ಈ ಸೈಕ್ಲೋಥಾನ್ ತಂಡವು ಮಾಜಾಳಿ ಚೆಕ್ ಫೋಸ್ಟ್ – ನೆಚ್ಚನ್‌ಬಾಗ್ಲ – ಹಿಪ್ಪಲಿ – ದಂಡೇಬಾಗ್ – ಬವಾಲ್ – ದೇವ್‌ಬಾಗ್ – ಸದಾಶಿವಗಡ – ಶಿವಾಜಿ ಕ್ರಾಸ್ – ಚಿಂಚೇವಾಡ – ರಾಮನಾಥ್ ವೃತ್ತ – ವಂಗಡ -ಮಾಜಾಳಿ ಮಾರ್ಗದ ಮೂಲಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಾಜಾಳಿಗೆ ತೆರಳಿತು, ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನಾಳೆ ಫೆ.17 ರಂದು ಬೆ.7 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದ ನಂತರ ಸೈಕ್ಲೋಥಾನ್ ತಂಡವು ಮುರುಡೇಶ್ವರದ ಕಡೆಗೆ ತೆರಳಲಿದೆ.

