ರಾಜ್ಯದ ಹಲವು ಜಿಲ್ಲೆಗಳ ನ್ಯಾಯಾಲಯಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಉತ್ತರಕನ್ನಡ, ಧಾರವಾಡ, ದಾವಣಗೆರೆ ಮುಂತಾದೆಡೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯಗಳ ಕಂಪ್ಯೂಟರ್ ವಿಭಾಗಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಕೂಡಲೇ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್‌ಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿವೆ. ನ್ಯಾಯಾಲಯದ ಒಳಗೆ, ಹೊರ ಆವರಣ, ವಾಹನ ನಿಲುಗಡೆ ತಾಣಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ನ್ಯಾಯಾಲಯದ
pdjuttara [email protected]ಗೆ ಬೆಳಗ್ಗೆ 08-25 ಗಂಟೆಗೆ ಈ ಮೇಲ್ ಬಂದಿದ್ದು, 2 ಆರ್‌ಡಿಎಕ್ಸ್ – ಐಇಡಿ ಕೋರ್ಟ್ ಜಡ್ಜ್ ಚೇಂಬರ್‌ನಲ್ಲಿ ಪ್ಲಾಂಟ್ ಮಾಡಲಾಗಿದ್ದು, ಶೀಘ್ರದಲ್ಲಿ ಬ್ಲಾಸ್ಟ್ ಆಗಲಿದೆ.‌ ತಮಿಳುನಾಡಿನಲ್ಲಿ ಇಡಬ್ಲ್ಯುಎಸ್ (ಆರ್ಥಿಕ ಹಿಂದುಳಿದ ವರ್ಗ) ಮೀಸಲಾತಿ ರಕ್ಷಿಸಿ ಹಾಗೂ ಕೋರ್ಟ್‌ನಲ್ಲಿದ್ದ ಎಲ್ಲಾ ಜನರನ್ನು 12.15ರ ಒಳಗಾಗಿ ಸ್ಥಳಾಂತರ ಮಾಡಿ ಎಂದು ಈ ಮೇಲ್‌ನಲ್ಲಿ ಬರೆಯಲಾಗಿದೆ.

Sunniya Dasan <[email protected]> ಎಂಬ ಅಪರಿಚಿತ ಐಡಿಯಿಂದ ಈಮೇಲ್ ಬಂದಿದ್ದು,
ಈ ಸಂದೇಶದ ಬಳಿಕ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇನ್ನು ಇ ಮೇಲ್‌ನಲ್ಲಿ ಹೆಚ್ಚಿನ ಮಾಹಿತಿ ಬರೆಯಲಾಗಿದ್ದು, ಸಂಪೂರ್ಣವಾಗಿ ತಮಿಳುನಾಡು ಡಿಎಂಕೆ ಸರಕಾರವನ್ನು ಟಾರ್ಗೆಟ್ ಮಾಡಲಾಗಿದೆ. 2021ರಲ್ಲಿ ಪ್ರಶಾಂತ್ ಕಿಶೋರ್, ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡು ಸರಕಾರ ಮಾಧ್ಯಮವನ್ನು ಬುಡಮೇಲು ಮಾಡಲು ಉದ್ದೇಶಿಸಿದೆ.

ಈ ಹಿನ್ನೆಲೆ ತನ್ನ ಪರವಾಗಿರುವ ಮಾಧ್ಯಮದವರ ಆಯ್ಕೆಗೆ ಏಜೆನ್ಸಿ ಹಾಗೂ ಮಧ್ಯವರ್ತಿಗಳಿಗೆ ಹೊರಗುತ್ತಿಗೆ ನೀಡಲಾಗಿತ್ತು. ಡಿಎಂಕೆ ಉದಯನಿಧಿ ಅಜೆಂಡಾ ನಡೆಸಲು ಈ ಹಿರಿಯ ಪತ್ರಕರ್ತರ ನೇಮಕ ಮಾಡಲಾಗಿತ್ತು. ಇವರ ಲೈಂಗಿಕ ಬಯಕೆ ಪೂರೈಸಲು ಬಾಲಕಿಯರನ್ನು ಕೂಡಾ ಬಳಸಲಾಗಿತ್ತು. ಮಾಧ್ಯಮದವರ ಹಾಗೂ ಬಾಲಕಿಯರ ಹೆಸರು ಇಂತಿದೆ ಅಂತಾ ವಿವಿಧ ಹೆಸರನ್ನು ಈಮೇಲ್‌ನಲ್ಲಿ ನಮೂದು ಮಾಡಲಾಗಿದೆ. ಅಲ್ಲದೇ, ಡಿಎಂಕೆಯ ಜಾಫರ್ ಸಾದಿಕ್‌ನಿಂದ ಬಾಲಕಿಯರನ್ನು ಪೂರೈಕೆ ಎಂದು ಈಮೇಲ್‌ನಲ್ಲಿ ಅನಾಮಿಕ ಬರೆದಿದ್ದಾನೆ.

ಇದರಲ್ಲಿ Pak ISI Cell – Coimbatore LTTE-TOSIS ಎಂದು ನಮೂದಿಸಿದ ಈಮೇಲ್ ಮೂಲಕ ಸಂದೇಶದ ಬೆದರಿಕೆ ಬಂದಿದ್ದು, ಬಾಂಬ್ ಬೆದರಿಕೆಯ ಹಿನ್ನೆಲೆ ಕೋರ್ಟ್‌ನ ಕೆಲವು ಕಲಾಪಗಳನ್ನು ಮುಂದೂಡಿಕೆ ಮಾಡಲಾಗಿದೆ.

ಈ ಹಿಂದೆ ಭಟ್ಕಳ ಹಾಗೂ ಕಾರವಾರ ತಹಶೀಲ್ದಾರ್ ಕಚೇರಿಗೂ ಇದೇ ಮಾದರಿಯ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಆ ಈಮೇಲ್‌ನಲ್ಲೂ ಇದೇ ಡಿಎಂಕೆ ವಿಚಾರವನ್ನು ಪ್ರಸ್ತಾಪ ಮಾಡಲಾಗಿತ್ತು. ಇದೀಗ ನ್ಯಾಯಾಲಯಗಳಿಗೆ ಬಂದಿರುವ ಈಮೇಲ್‌ನಲ್ಲೂ ಮತ್ತದೇ ವಿಚಾರ ಪ್ರಸ್ತಾಪ ಮಾಡಲಾಗಿದ್ದು, ಪೊಲೀಸರು ವಿಪಿಎನ್ ಪತ್ತೆ ಹಚ್ಚಿ ಅದರ ಮೂಲಕ ನೈಜ ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿಸಿದ್ದಾರೆ.