Bhatkal| ರಂಜಾನ್ ಹಿನ್ನೆಲೆ ಸ್ಥಾಪಿಸಲಾಗಿದ್ದ ಸುಮಾರು 20 ಅಡಿ ಎತ್ತರದ ಮುಸ್ಲಿಂ ಧಾರ್ಮಿಕ ಧ್ವಜವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯ ಅಸಮಾಧಾನಗೊಂಡು ಪರಿಸ್ಥಿತಿ ಉದ್ವಿಗ್ನಗೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ.
ರಂಜಾನ್ ಹಬ್ಬ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರಸಭೆ ಅಧಿಕಾರಿಗಳು ಬಂದರು ರಸ್ತೆಯಲ್ಲಿ ಹಾಕಿದ್ದ ಧ್ವಜವನ್ನು ತೆರವುಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಸಮುದಾಯದವರು ಪುರಸಭೆ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಬೃಹತ್ ಧ್ವಜವನ್ನು ಕೈಯಲ್ಲಿ ಹಿಡಿದು ಭಟ್ಕಳದ ಬಂದರು ರಸ್ತೆಯನ್ನು ಬಂದ್ ಮಾಡಲು ಯತ್ನಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನಂತರ ಡಿವೈಎಸ್ಪಿ ಹಾಗೂ ನಗರಸಭೆ ಅಧಿಕಾರಿಗಳು ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಕೆಲಕಾಲ ಧ್ವಜವನ್ನು ಮರುಹಾರಿಸಲು ಅವಕಾಶ ನೀಡಲಾಗಿತ್ತು. ಬಳಿಕ ಮುಸ್ಲಿಂ ಸಮುದಾಯದವರೇ ಸ್ವಯಂಪ್ರೇರಿತರಾಗಿ ಧ್ವಜವನ್ನು ತೆರವುಗೊಳಿಸಿದರು.
ಘಟನೆ ಸಂಬಂಧ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನತೆ ನಿರ್ಮಾಣವಾದರೂ, ಪೊಲೀಸರ ಸಮಯೋಚಿತ ಕ್ರಮದಿಂದ ಪರಿಸ್ಥಿತಿ ಶಾಂತಗೊಂಡಿದೆ.
