Udupi: ಮೂರು ದಿನಗಳ ಕಾಲ ಬಾವಿಯಲ್ಲಿದ್ದು ಪವಾಡಸದೃಶರಾಗಿ ವೃದ್ಧರೋರ್ವರು ಬದುಕಿಬಂದ ಘಟನೆ ಉಡುಪಿ ಜಿಲ್ಲೆಯ ಆದಿಉಡುಪಿ ಕಂಬಳಕಟ್ಟೆಯಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದೆ.
ಶ್ರೀನಿವಾಸ ಆಚಾರ್ಯ (ಅಂದಾಜು 62 ವರ್ಷ ) ಎಂಬವರೇ ಮೂರು ದಿನಗಳ ಬಳಿಕ ಬಾವಿಯೊಳಗಿನಿಂದ ಬದುಕಿ ಬಂದವರು. ಒಬ್ಬಂಟಿಯಾಗಿರುವ ಶ್ರೀನಿವಾಸ ಆಚಾರ್ಯರಿಗೆ ಕಳೆದ ಎರಡು ತಿಂಗಳ ಹಿಂದೆ ದೇಹದ ಬಲಭಾಗಕ್ಕೆ ಸ್ಟ್ರೋಕ್ ಕಾಣಿಸಿದ್ದು, ಬಳಿಕ ಗುಣಮುಖರಾಗಿದ್ದರು.

ತನ್ನ ಮನೆಯ ಅಂಗಳದಲ್ಲಿರುವ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಯಲ್ಲಿ ಕಸ ಬಿದ್ದು ನೀರು ಸರಿಯಾದ ಬಾರದ ಕಾರಣ ಪಂಪ್ ಪೈಪ್ಗೆ ಕಟ್ಟಿದ್ದ ಹಗ್ಗವನ್ನು ಎಳೆಯಲು ಹೋಗಿದ್ದರು. ಹಗ್ಗ ಎಳೆಯುತ್ತಿದ್ದಂತೇ ಹಗ್ಗ ಕಟ್ಟಾಗಿದ್ದು, ಬಲಭಾಗದಲ್ಲಿ ಮೊದಲೇ ಅನಾರೋಗ್ಯ ಸಮಸ್ಯೆಯಿದ್ದ ಕಾರಣ ಇವರನ್ನು ಎಳೆದಂತಾಗಿ ನೇರವಾಗಿ ಬಾವಿಗೊಳಗೆ ಬಿದ್ದಿದ್ದರು.
ನೀರಿನಲ್ಲಿ ಮುಳುಗಿ ಪ್ರಾಣ ಉಳಿಸಿಕೊಳ್ಳಲು ತಡಕಾಡಿದಾಗ ತುಂಡಾದ ಹಗ್ಗ ಹಾಗೂ ಪೈಪ್ ಸಿಕ್ಕಿದ್ದು, ಅದನ್ನೇ ಹಿಡಿದುಕೊಂಡು ರಕ್ಷಣೆಗಾಗಿ ಕೂಗಿದ್ದರು. ಆದರೆ, ಅವರಿಂದ ಮನೆಯಿಂದ ಸ್ಥಳೀಯರ ಮನೆ 90ಮೀಟರ್ ದೂರವಿದ್ದ ಕಾರಣ ಶ್ರೀನಿವಾಸರ ಆರ್ತನಾದ ಕೂಡಾ ಯಾರಿಗೂ ಕೇಳಿರಲಿಲ್ಲ.
ಭಟ್ರನ್ನು ಉಳಿಸಿದ ಗ್ಯಾಸ್
ಕೆಲವು ದಿನಗಳ ಹಿಂದೆ ಶ್ರೀನಿವಾಸ ಆಚಾರ್ಯರು ಗ್ಯಾಸ್ ಬುಕ್ ಮಾಡಿದ್ರೂ ಬಾರದ ಕಾರಣ ತನ್ನ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಗ್ಯಾಸ್ ಸಿಲಿಂಡರ್ ಪಡೆದಿದ್ದರು. ಆದರೆ, ದಿನ ಕಳೆದಂತೆ ಗಣೇಶ್ ಅವರಿಗೂ ಗ್ಯಾಸ್ ಅಗತ್ಯ ಬಿದ್ದಾಗ ಶ್ರೀನಿವಾಸರು ತನಗಿನ್ನೂ ಗ್ಯಾಸ್ ಬಂದಿಲ್ಲ ಎಂದಿದ್ದರು. ಸುಮಾರು 3-4 ದಿನಗಳ ಬಳಿಕ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ “ಭಟ್ಟರಿಗೆ ಒಮ್ಮೆ ಗ್ಯಾಸ್ ಸಿಲಿಂಡರ್ ಕೊಡಿ. ಅವರು ನನ್ನ ಗ್ಯಾಸ್ ಸಿಲಿಂಡರ್ ತೆಗೆದುಕೊಂಡಿದ್ದಾರೆ” ಎಂದು ಗ್ಯಾಸ್ ಏಜೆನ್ಸಿ ಸಿಬಂದಿ ಬಳಿ ಗಣೇಶ್ ಹೇಳಿದ್ದರು.
ಆಗ ಸಿಬ್ಬಂದಿ ಎರಡು ದಿನಗಳ ಹಿಂದೆಯೇ ಅವರ ಮನೆಗೆ ತೆರಳಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದರು. ಇದನ್ನು ಕೇಳಿ ಶಾಕ್ ಆದ ಗಣೇಶ್ ತನ್ನ ಬಾಡಿಗೆ ಮನೆಯವರಿಗೆ ಕರೆ ಮಾಡಿ ಶ್ರೀನಿವಾಸ್ ಅವರ ಮನೆಯ ಬಳಿ ನೋಡಿಕೊಂಡು ಬರುವಂತೆ ಹೇಳಿದ್ದರು. ಬಾಡಿಗೆ ಮನೆಯವರು ಮನೆಯ ಬಳಿ, ಸುತ್ತಮುತ್ತಾ ಯಾರೂ ಇರದ್ದನ್ನು ನೋಡಿ ಬಳಿಕ ಗಣೇಶ್ ಸೂಚನೆ ಮೇರೆಗೆ ಬಾವಿಗೆ ಇಣುಕಿದ್ದರು.
ಆಗ ಬಾವಿಯಲ್ಲಿ ಪೈಪ್ ಹಾಗೂ ಹಗ್ಗ ಹಿಡಿದು ಶ್ರೀನಿವಾಸರು ನೇತಾಡುತ್ತಿರುವುದು ಕಂಡುಬಂದಿತ್ತು. ಕೂಡಲೇ ಸ್ಥಳೀಯರು ಜಮಾಯಿಸಿ ಬಾವಿಯೊಳಗೆ ಏಣಿ ಇಳಿಸಿ ಅವರನ್ನು ಮೇಲಕ್ಕೆ ಬರಲು ಕರೆದಿದ್ದರಾದ್ರೂ 3 ದಿನಗಳಿಂದ ಏನೂ ತಿನ್ನದೇ ನಿತ್ರಾಣಗೊಂಡಿದ್ದರಿಂದ ಅವರಿಗೆ ಮೇಲಕ್ಕೆ ಬರಲಾಗಿರಲಿಲ್ಲ. ಈ ಹಿನ್ನೆಲೆ ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದರು.
ಅಗ್ನಿಶಾಮಕದಳದ ಆಪರೇಷನ್
ಸೋಮವಾರ ರಾತ್ರಿ 9 ಗಂಟೆಗೆ ಕರೆ ಬಂದ ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳಾದ ಸತೀಶ್, ಅಶ್ವಿನ್ ಅನಿಲ್, ಭರತ್ ಎನ್., ಗಣೇಶ್ ವೇತಾಳ್, ಮಹಾಂತೇಶ್ ಅವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಬಾವಿಗೆ ಇಳಿದು ಚೇರ್ ನಾಟ್ ಮೂಲಕ ಶ್ರೀನಿವಾಸ ಅವರನ್ನು ಮೇಲಕ್ಕೆಳೆದಿದ್ದರು. ನಂತರ ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
