ಚಾಮರಾಜನಗರ// ಇಲ್ಲಿನ ರಾಮಸಮುದ್ರದಲ್ಲಿ 28 ವರ್ಷಗಳ ಬಳಿಕ ಮೊದಲ ಬಾರಿಗೆ  ಚೌಡೇಶ್ವರಿ ದೇವಿಯ 47 ನೇ ವರ್ಷದ ವರ್ಧಂತೋತ್ಸವ ಹಾಗೂ ವಿಶಿಷ್ಟ ರೀತಿಯ ಕತ್ತಿ ಹಬ್ಬ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. 

ರಾಕ್ಷಸರನ್ನು ಸಂಹಾರ ಮಾಡಿದ ಉಗ್ರ ಸ್ವರೂಪಿ ಚೌಡೇಶ್ವರಿ ದೇವಿಗೆ ರಕ್ತತರ್ಪಣೆ ಮಾಡಿ ಶಾಂತಗೊಳಿಸುವ ಧ್ಯೋತಕವಾಗಿ ದೇವಾಂಗ ಸಮುದಾಯ ಈ ಹಬ್ಬ ಆಚರಿಸಿಕೊಂಡು ಬರುತ್ತಿದೆ. ನಾಲ್ಕು ದಿನಗಳ ಕಾಲ  ಚೌಡೇಶ್ವರಿ ದೇವಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳ ಜತೆ ನಡೆದ ಹಬ್ಬದಲ್ಲಿ ಅಲಗು ಸೇವೆ ಪ್ರಮುಖವಾಗಿದೆ. ಕತ್ತಿ ಹಬ್ಬದ ದಿನದಂದು ಬಿಳಿ ಕುದುರೆ ಮೇಲೆ ದೇವಿಯ ಕಳಶ ಇಟ್ಟು ಮೆರವಣಿಗೆ ಮಾಡಿ ನೂರಾರು ಮಂದಿ ಹರಿತವಾದ ಕತ್ತಿಗಳಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುತ್ತಾ ರಕ್ತ ಬರುವಂತೆ ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ. ಕೆಲವರು ಖಡ್ಗಗಳ  ಮೇಲೆ ಕುತ್ತಿಗೆ ಇಟ್ಟು ಅವರ ದೇಹದ ಮೇಲೆ ಇನ್ನಿತರರು ನಿಂತು ಕತ್ತಿಗಳಿಂದ ಹೊಡೆದುಕೊಳ್ಳುವ ದೃಶ್ಯಗಳೂ ಕಂಡು ಬಂದಿತ್ತು. 

ಅಂದಹಾಗೆ, ಈ ಕತ್ತಿ ಹಬ್ಬ ಆಚರಣೆಗೆ ಪೌರಾಣಿಕ ಹಿನ್ನೆಲೆಯೂ ಇದೆ. ದೇವಾನುದೇವತೆಗಳಿಗೆ ವಸ್ತ್ರ ತಯಾರು ಮಾಡುತ್ತಿದ್ದ ದೇವಾಂಗ ದೇವಲ ಮಹರ್ಷಿಯನ್ನು ಕೊಲ್ಲಲು ದೈತ್ಯ ರಾಕ್ಷಸರು ಮುಂದಾಗಿದ್ದಾಗ ಪಾರ್ವತಿ ದೇವಿ ಚೌಡೇಶ್ವರಿಯ ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿದ್ದಳು. ಬಳಿಕ ಉಗ್ರ ಸ್ವರೂಪಿಯಾಗಿದ್ದ ಚೌಡೇಶ್ವರಿಯ ಮುಂದೆ ದೇವಲ ಮಹರ್ಷಿ  ಖಡ್ಗದಿಂದ ತನ್ನ ಮೈ ಮೇಲೆ ಹೊಡೆದುಕೊಂಡು ರಕ್ತ ತರ್ಪಣೆ ಮಾಡಿ ದೇವಿಯನ್ನು ಶಾಂತಗೊಳಿಸಿದರು ಎಂಬ ನಂಬಿಕೆ ಇದೆ. ಇದರ ಧ್ಯೋತಕವಾಗಿ ಇಂದಿಗೂ ಕತ್ತಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ..

ಈ ಕತ್ತಿ ಹಬ್ಬದಲ್ಲಿ ರಾಜ್ಯವಷ್ಟೇ ಅಲ್ಲ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ಭಕ್ತರು ಪಾಲ್ಗೊಂಡು ತಮ್ಮ ಕುಲದೇವತೆ ಚೌಡೇಶ್ವರಿ ದೇವಿಗೆ ಅಲಗುಸೇವೆ ಸಲ್ಲಿಸಿದರು. ಅಲಗು ಸೇವೆ ಮೇಲ್ನೋಟಕ್ಕೆ ಹಿಂಸೆಯ ಆಚರಣೆಯಂತೆ ಕಂಡರೂ ಇದು ಹಿಂಸೆಯ ಪ್ರತೀಕವಲ್ಲ, ಬದಲಿಗೆ ಅರ್ಪಣಾ ಮನೋಭಾವದಿಂದ ದೇವಿಗೆ ಸಲ್ಲಿಸುವ ಸೇವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.