Karwar| ಕಾರವಾರದ ನೌಕಾನೆಲೆಯಲ್ಲಿ ಪ್ರಿನ್ಸಿಪಲ್ ಮೈಂಟೈನೆನ್ಸ್ ಆಫೀಸರ್ಸ್ ಕಮಿಟಿ (PMOC)ಯ ಮಹತ್ವದ ಸಭೆಯು ಹೆಡ್ ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (HQ IDS) ಅಧೀನದಲ್ಲಿ ನಡೆಯಿತು.
ಈ ಸಭೆಯಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ಸೇರಿದಂತೆ ತ್ರಿಸೇವೆಗಳ ನಿರ್ವಹಣೆ ಹಾಗೂ ನಿರಂತರ ಕಾರ್ಯಕ್ಷಮತೆ (maintenance & sustenance) ವಿಷಯಗಳ ಬಗ್ಗೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಿಂದ ಮೂರು ಸೇನೆಗಳ ನಡುವೆ ಇನ್ನಷ್ಟು ಸಮನ್ವಯ (synergy) ವೃದ್ಧಿಯಾಗುವ ನಿರೀಕ್ಷೆಯಿದೆ.

2021ರಲ್ಲಿ ಸ್ಥಾಪನೆಯಾದ PMOC, ತ್ರಿಸೇವೆಗಳ ಏಕೀಕರಣ (Integration) ಮತ್ತು ಸಂಯುಕ್ತ ಸಾಮರ್ಥ್ಯ (Joint Capability) ಹೆಚ್ಚಿಸುವ ದಿಶೆಯಲ್ಲಿ ಕ್ರಮೇಣ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಜೊತೆಗೆ, ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಆತ್ಮನಿರ್ಭರ ಭಾರತ (Atmanirbhar Bharat) ಉದ್ದೇಶಕ್ಕೂ ಸಹಕಾರ ನೀಡುತ್ತಿದೆ.

ಈ ಸಭೆಯನ್ನು ತ್ರಿಸೇವೆಗಳ ಸಮಗ್ರ ಶಕ್ತಿವರ್ಧನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ದೇಶದಲ್ಲಿ ಯುದ್ಧ, ರಕ್ಷಣೆ ಹಾಗೂ ನೈಸರ್ಗಿಕ ಪ್ರಕೋಪಗಳು ಎದುರಾದ ಸಂದರ್ಭದಲ್ಲಿ ಈ ತ್ರಿಸೇವೆಗಳು ಒಂದೇ ಮುಷ್ಠಿಯಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.
