Dandeli| ಕಾನೂನುಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿ, ಬಡ್ಡಿ ಹೆಸರಿನಲ್ಲಿ ಬಡವರ, ಅಮಾಯಕರ ಸುಲಿಗೆ ನಡೆಸುತ್ತಿದ್ದ ನಗರದ ವ್ಯಕ್ತಿಯೊಬ್ಬನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಹಣಕಾಸಿನ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಂಡೇಲಿಯ ಗಾಂಧಿನಗರ ಆಶ್ರಯ ಕಾಲೋನಿಯ ನಿವಾಸಿ ರಿಯಾಜ್ @ ಶೇರಖಾನ್ ತಂದೆ ಇಬ್ರಾಹಿಂ ಲಿಂಬೂವಾಲೆ (32) ಎಂಬುವವನ ಮನೆ ಮೇಲೆಯೇ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮೀಟರ್ ಬಡ್ಡಿ ಹಾವಳಿ ಮಿತಿಮೀರಿತ್ತು. ಆರೋಪಿಯು ಯಾವುದೇ ಪರವಾನಗಿ ಪಡೆಯದೇ ಮೀಟರ್ ಬಡ್ಡಿ ವ್ಯವಹಾರ ನಡೆಸಿ, ಮಿತಿಗಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾರವಾರದ ಸಹಕಾರಿ ಸಂಘಗಳ ಸಹಾಯಕ ನಿಭಂದಕರ ಕಛೇರಿಯ ಸಹಾಯಕ ನಿಬಂಧಕಿ ಶ್ರೀದೇವಿ ಡಿ. ಕಟ್ಟಿಮನಿ ಹಾಗೂ ಅಧಿಕಾರಿಗಳು ಆರೋಪಿಯ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳ ಸಹಿ ಇರುವ 14 ಖಾಲಿ ಚೆಕ್‌ಗಳು, ಪ್ರಶ್ನಾತೀತ ದಾಖಲೆಗಳು ಹಾಗೂ ಬಡ್ಡಿ ವ್ಯವಹಾರದ ನೋಟ್ ಪುಸ್ತಕಗಳು ಪತ್ತೆಯಾಗಿವೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
