Karwar| ಹೊಸದಾಗಿ ನಿರ್ಮಿಸಲಾದ ಸಿಮೆಂಟ್ ರಸ್ತೆಯ ಮೇಲೆಯೇ ಡಾಂಬರ್ ಹಾಕಿ ಗುತ್ತಿಗೆದಾರನೊಬ್ಬ ಎಡವಟ್ಟು ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಗುತ್ತಿಗೆದಾರನೊಬ್ಬ ನಗರದಿಂದ ಹಬ್ಬುವಾಡಾದವರೆಗಿನ ಸಿಮೆಂಟ್ ರಸ್ತೆಯ ಮೇಲೆ ಡಾಂಬರ್ ಸುರಿಯಲು ಆರಂಭಿಸಿದ್ದ. ಆ ಮಾರ್ಗದಿಂದ ಸಾಗುವ ಜನಕ್ಕೆ ಇದನ್ನು ನೋಡಿ ಆಶ್ಚರ್ಯ, ದುಃಖ ಎರಡೂ ಒಮ್ಮೆಗೆ ಆಗಿದೆ. ಸಿಮೆಂಟ್ ರಸ್ತೆಯ ಮೇಲೆ ಡಾಂಬರ್ ಯಾಕೆ ಎಂಬ ಪ್ರಶ್ನೆ ಮನಸ್ಸಿನಲ್ಲೇ ಮೂಡಿದೆ. ಇನ್ನೂ ಕೆಲವರು ಇದು ಹೊಸ ಟೆಕ್ನಾಲಜಿ ಇರಬೇಕು. ಅದ್ಯಾವ ಟೆಕ್ನಾಲಜಿ ಎಂದು ಗೂಗಲ್ ದಲ್ಲಿ ಹುಡುಕಾಟಕ್ಕೂ ಮುಂದಾಗಿದ್ದಾರೆ. ಅಲ್ಲೂ ಯಾವುದೇ ಮಾಹಿತಿ ದೊರಕದಿದ್ದಾಗ, ದೊಡ್ಡ ಸಿಟಿಯಲ್ಲಿರುವ ತಮ್ಮವರಿಗೆ ಫೋನಾಯಿಸಿ ನಿಮ್ಮ ಸಿಟಿಯಲ್ಲಿ ಈ ರೀತಿ ಟೆಕ್ನಾಲಜಿ ಇದೆಯಾ ಎಂದು ಕೇಳಿದ್ದಾರೆ. ಅಲ್ಲೂ ಯಾವುದೇ ಮಾಹಿತಿ ದೊರಕದಿದ್ದಾಗ ತಲೆ ಕೆರೆದುಕೊಂಡು, ನಗರಸಭೆ, ಪಿಡಬ್ಲುಡಿ ಅಧಿಕಾರಿಗಳಿಗೆ ಫೋನಾಯಿಸಿ ವಿಚಾರಿಸಿದ್ದಾರೆ. ಇದ್ಯಾವ ಹೊಸ ತಂತ್ರಜ್ಞಾನ ಎಂದು ವಿಚಾರಿಸಿದ್ದಾರೆ.
ಆಗ ದಡಬಡಾಯಿಸಿ ಓಡಿ ಬಂದ ಅಧಿಕಾರಿಗಳು ಈ ‘ವಿಚಿತ್ರ’ ಕಾಮಗಾರಿಯನ್ನು ಕೂಡಲೇ ಬಂದ್ ಮಾಡಿಸಿದ್ದಾರೆ.
ಅಸಲಿಯತ್ತು ಅಲ್ಲಿ ಆಗಿದ್ದೇನು ಎಂದರೇ ಎಲ್ಲೋ ಸುರಿಯಬೇಕಾಗಿದ್ದ ಡಾಂಬರ್ ನ್ನು ಗುತ್ತಿಗೆದಾರ ಕಾರವಾರ – ಹಬ್ಬುವಾಡದ ಒಂದಕ್ಕೂ ಹೆಚ್ಚು ಕಿಲೋಮೀಟರ್ ವರೆಗಿನ ಸಿಮೆಂಟ್ ರಸ್ತೆಯ ಮೇಲೆ ಸುರಿದಿದ್ದ.
ಗುತ್ತಿಗೆದಾರನ ಎಡವಟ್ಟಿನಿಂದ ಹೀಗಾಗಿದೆ ಎಂದು ಅರಿತ
ಸಾರ್ವಜನಿಕರು ಈ ಎಡವಟ್ಟಿಗೆ ಕಾರಣರಾದ ಗುತ್ತಿಗೆದಾರ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ನೂತನ ಸಿಮೆಂಟ್ ರಸ್ತೆಯ ಮೇಲೆ ಡಾಂಬರ್ ಸುರಿದು ಹಾಳು ಮಾಡಿದ ಬಗ್ಗೆ ಗುತ್ತಿಗೆದಾರನಿಗೆ
ದಂಡ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
