Bhatkal| ಇಂದು ಪಟ್ಟಣದಲ್ಲಿ ನಡೆಯಲಿದ್ದ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಆಗಮಿಸಬೇಕಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಗೈರಾಗಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ಮುಜುಗರಕ್ಕೆ ಕಾರಣವಾದರೆ, ಕಾರ್ಯಕರ್ತರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಭಾನುವಾರ ಭಟ್ಕಳದ ಶಿರಾಲಿ ಬಳಿ ಚಿಪ್ಪಿಕಲ್ಲು ತೆಗೆಯುವಾಗ ಉಂಟಾದ ದುರಂತದಲ್ಲಿ ಮೃತರಾದ ಹನ್ನೊಂದು ಜನರ ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗಿ ಪಕ್ಷದ ವತಿಯಿಂದ ಸಾಂತ್ವನ ಹೇಳುವುದು ಮತ್ತು ಅಮ್ಮನವರ ಹೊರೆ ಇಡುವ ಮುರಿನಕಟ್ಟೆ ಧ್ವಂಸವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಪಕ್ಷದಿಂದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಎರಡೂ ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ಭಾಗವಹಿಸಬೇಕಿತ್ತು. ಅಶೋಕ್ ಭಾಗವಹಿಸಿದ್ದರೂ ಕೊನೆಯ ಕ್ಷಣದಲ್ಲಿ ಬಿ.ವೈ.ವಿಜಯೇಂದ್ರ ಕಾರ್ಯಕ್ರಮಕ್ಕೆ ಹಾಜರಾಗದೇ ದೂರವೇ ಉಳಿದಿದ್ದಾರೆ.‌ ಶಿಕಾರಿಪುರದವರೆಗೆ ಬಂದಿದ್ದ ವಿಜಯೇಂದ್ರ ತುರ್ತು ಕಾರಣದಿಂದ ಭಟ್ಕಳಕ್ಕೆ ಪ್ರವಾಸ ರದ್ದು ಮಾಡಿದರು ಎನ್ನಲಾಗಿದೆ. ಆದರೆ, ಇದು ಕಾರ್ಯಕರ್ತರಲ್ಲಿ ವ್ಯಾಪಕ‌ ಅಕ್ರೋಶಕ್ಕೆ ಕಾರಣವಾಗಿದೆ. ಮುರಿನಕಟ್ಟೆ ಧ್ವಂಸ ವಿಷಯನ್ನು ಭಾವನಾತ್ಮಕವಾಗಿ ತೆಗೆದುಕೊಂಡಿರುವ ಸ್ಥಳೀಯರು, ಹಿಂದು ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಈ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತ್ರ ಅಗಮಿಸಿದ್ದಾರೆ. ಇನ್ನುಳಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡಿದ್ದಾರೆ.

ಆದರೆ, ಕಾರ್ಯಕ್ರಮದ ಕೇಂದ್ರ ಬಿಂದುವಾಗಬೇಕಿದ್ದ ವಿಜಯೇಂದ್ರ ಮಾತ್ರ ಕೊನೆಯ ಕ್ಷಣದಲ್ಲಿ ಕೈ ಕೊಟ್ಟಿರುವುದು ಪಕ್ಷದ ಪ್ರಮುಖರಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ತುರ್ತು ಕೆಲಸದ ಹಿನ್ನೆಲೆ‌ ಬೆಂಗಳೂರಿಗೆ ವಿಜಯೇಂದ್ರ ವಾಪಾಸ್ ತೆರಳಿರುವುದು ತಿಳಿದುಬಂದಿದ್ದು, ಇಂತಹ ಪ್ರಮುಖ ಘಟನೆ ಹಾಗೂ ಕಾರ್ಯಕ್ರಮಕ್ಕಿಂತ ಬೇರೆ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಿರುವುದು ಸರಿಯಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳಿಯಾದರೂ ವಿಜಯೇಂದ್ರ ಹಿಂತಿರುಗಬೇಕಿತ್ತು ಎನ್ನುವ ಮಾತುಗಳು ಜನರಿಂದ ಕೇಳಿಬಂದಿದೆ.