Karwar| ಕಾರವಾರ ಕ್ಷೇತ್ರದಲ್ಲಿ ಬಿಜೆಪಿಗೇ ಟಿಕೆಟ್ ಖಾತ್ರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
ಈ ಬಾರಿ ಕಾರವಾರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುವ ಆನಂದ ಅಸ್ನೋಟಿಕರ್ ಹೇಳಿಕೆ ಕುರಿತಂತೆ
ಕಾರವಾರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾರವಾರ ಕ್ಷೇತ್ರ ಬಿಜೆಪಿಯ ಗಟ್ಟಿ ನೆಲ. ಯಾವ ಕಾರಣಕ್ಕೂ ಬಿಜೆಪಿಗೆ ಕಾರವಾರ ಕ್ಷೇತ್ರ ತಪ್ಪಲ್ಲ. ಇನ್ನು ಮೈತ್ರಿ ವಿಚಾರ ಕೇವಲ ಲೋಕಸಭಾ ಚುನಾವಣೆಗಷ್ಟೆ ಇತ್ತು. ಇನ್ನು ವಿಧಾನಸಭಾ ಚುನಾವಣೆಗೆ ಅಂತಿಮಗೊಂಡಿಲ್ಲ ಎಂದರು.
ಕರಾವಳಿ ಬಿಜೆಪಿಗೆ ಗಟ್ಟಿ ನೆಲವಾಗಿದ್ದು, ಇಲ್ಲಿ ಜೆಡಿಎಸ್ ಗೆ ಯಾವುದೇ ನೆಲೆ ಇಲ್ಲ. ಮೇಲಾಗಿ ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರತಿನಿಧಿಸುವ ವ್ಯಕ್ತಿಗಳು ಕ್ಷೇತ್ರದಿಂದ ಜನರಿಂದ ದೂರವಾಗಿ ದಶಕಗಳೇ ಕಳೆದಿದೆ ಎಂದರು.
ಇನ್ನು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ನಾಯಕ ಅಸ್ನೋಟಿಕರ್ ನಾಪತ್ತೆಯಾಗಿ, ಅವರು ಯಾರನ್ನು ಬೆಂಬಲಿಸಿದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಆ ವ್ಯಕ್ತಿಗೆ ಸ್ಪಷ್ಟ ರಾಜಕೀಯ ನೆಲೆ, ನಿಲುವು ಇಲ್ಲ ಎಂದು ಟಾಂಗ್ ನೀಡಿದರು.
ಪತ್ರಿಕಾಗೋಷ್ಠಿ ಮಹಿಳಾ ಮೀಸಲಾತಿ ವಿಷಯಕ್ಕೆ ಸಂಬಂಧಿಸಿರುವುದರಿಂದ ರಾಜಕೀಯ ವಿಚಾರ ಚರ್ಚೆ ಬೇಡ ಎಂದು ಹೆಚ್ಚಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
