ಅಮೆರಿಕ-ಇಸ್ರೇಲ್ ಮೇಲಿನ ದ್ವೇಷದ ಕಿಚ್ಚಿನಿಂದ ಇರಾನ್, ತನ್ನ ನೆರೆಯ ಗಲ್ಫ್ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಸೌದಿ ಅರೇಬಿಯಾ, ಕತಾರ್, ಯುಎಇ, ಬಹರೈನ್, ಕುವೈತ್, ಒಮಾನ್ ದೇಶಗಳ ಮೂಲಸೌಕರ್ಯ ವ್ಯವಸ್ಥೆ ಸೇನಾ ನೆಲೆಗಳು, ಜನವಸತಿ ಪ್ರದೇಶ, ವಿಮಾನ ನಿಲ್ದಾಣ, ತೈಲ ಹಾಗೂ ಅನಿಲ ಸಂಸ್ಕರಣಾ ಘಟಕಗಳ ಮೇಲೆ ಏಕಕಾಲದಲ್ಲಿ ಇರಾನ್ ಮಿಲಿಟರಿಯು ನೂರಾರು ಕ್ಷಿಪಣಿಗಳನ್ನು ಪ್ರಯೋಗಿಸಿದೆ. .
ಇಷ್ಟು ದಿನ ಸಹಿಸಿಕೊಂಡಿದ್ದ ಗಲ್ಫ್ ರಾಷ್ಟ್ರಗಳು ಇದೀಗ ಇರಾನ್ ವಿರುದ್ಧವೇ ತಿರುಗಿ ಬಿದ್ದಿದ್ದು, ತಮ್ಮ ತೈಲ ಸಂಸ್ಕರಣಾ ಘಟಕಗಳ ಮೇಲೆ ಟಾರ್ಗೆಟ್ ಮಾಡಿರುವ ಬೆನ್ನಲ್ಲೇ ಸಿಡಿದೆದ್ದಿರುವ ನೆರೆಯ ದೇಶಗಳು ಇರಾನ್ ಮೇಲೆ ಪ್ರತಿದಾಳಿ ನಡೆಸಲಾರಂಭಿಸಿದೆ. ಇದೇ ವೇಳೆ, ಇರಾನ್ ಪರವಾಗಿ ಹೆಜ್ಜುಲ್ಲಾ ಬಂಡುಕೋರರು ಲೆಬನಾನ್ ವಾಯುನೆಲೆ ಬಳಸಿಕೊಂಡು ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ್ರೆ, ಇದಕ್ಕೆ ಉತ್ತರವಾಗಿ ಇಸ್ರೇಲ್ ಲೆಬನಾನ್ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಿದೆ. ಇನ್ನೊಂದೆಡೆ, ಸೈಪ್ರಸ್ ಮೇಲಿನ ದಾಳಿಗೆ ಕೆರಳಿರುವ ಗ್ರೀಕ್ ಸಹ ಸಮರಕ್ಕೆ ಧುಮುಕುವ ಸೂಚನೆ ನೀಡಿದೆ.
*ಸಂಕಷ್ಟದಲ್ಲಿ ಭಾರತೀಯರು*
ಇರಾನ್ ಕಿಚ್ಚಿನಿಂದ ಗಲ್ಫ್ ದೇಶಗಳು, ಇಸ್ರೇಲ್ನತ್ತ ಹಾರಿಸ್ತಿರುವ ಕೆಲವು ಹಲವು ಕ್ಷಿಪಣಿಗಳು ಆಕಾಶದಲ್ಲೇ ಛಿದ್ರಛಿದ್ರವಾದ್ರೆ, ಇನ್ನು ಬೆರಳೆಣಿಕೆಯವು ಗಲ್ಫ್ ದೇಶಗಳು, ಇಸ್ರೇಲ್ನ ಅಂಗಳಕ್ಕೆ ಉರುಳಿ ಬೀಳ್ತಿವೆ.
ಈ ಗಲ್ಫ್ ದೇಶಗಳಾದ ಸೌದಿ ಅರೇಬಿಯಾ, ಕತಾರ್, ಯುಎಇ, ಬಹರೇನ್, ಕುವೈತ್, ಒಮನ್ ದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಜೀವನಕ್ಕಾಗಿ ದುಡಿಯುತ್ತಿದ್ದಾರೆ. ಅತ್ಯಂತ ಸುರಕ್ಷಿತ ದೇಶಗಳು ಎಂದೆನಿಸಿಕೊಂಡಿದ್ದ ಈ ದೇಶಗಳಲ್ಲಿ ಅಸುರಕ್ಷತೆ ಕಾಡಲಾರಂಭಿಸಿದ್ದು, ತಮ್ಮನ್ನು ಭಾರತಕ್ಕೆ ವಾಪಾಸ್ ಕರೆದೊಯ್ಯುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿದೇಶಗಳಿಗೆ ದುಡಿಯಲು ಹಾಗೂ ತಿರುಗಾಡಲು ತೆರಳಿರುವ ಕರ್ನಾಟಕ ನಿವಾಸಿಗಳು ವಾಪಾಸ್ ಬರಲಾಗದೇ ಚಡಪಡಿಸುತ್ತಿದ್ದಾರೆ. ಕಳೆದ ಫೆಬ್ರವರಿ 24ಕ್ಕೆ ಬಳ್ಳಾರಿ ಜಿಲ್ಲೆಯ 35 ಜನ ಸೇರಿ
ದುಬೈ ಪ್ರವಾಸಕ್ಕೆ ತೆರಳಿದ್ದ 50 ಜನರು ಫೆಬ್ರವರಿ 28ಕ್ಕೆ ವಾಪಾಸ್ ಭಾರತಕ್ಕೆ ಬರಬೇಕಿತ್ತು. ಆದ್ರೆ, ದುಬೈ ಏರ್ಪೋರ್ಟ್ ಬಂದ್ ಆಗಿದ್ರಿಂದ ದುಬೈನಲ್ಲೇ ಸಿಲುಕಿದ್ದಾರೆ. ಭಾರತಕ್ಕೆ ವಾಪಾಸ್ ಬರಲಾಗದೇ ದುಬೈನಲ್ಲೇ ಲಾಕ್ ಆಗಿ ಪರದಾಟ ನಡೆಸುತ್ತಿದ್ದಾರೆ.
ಸೌದಿಅರಿಬಿಯಾದಲ್ಲಿ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ನಿವಾಸಿ ಸಿದ್ದರಾಮರೆಡ್ಡಿ ಮಾಲಿಪಾಟೀಲ ಜತೆ ಆರೇಳು ಮಂದಿ ಸಂಕಷ್ಟದಲ್ಲಿದ್ದು, ಸಹಾಯ ಯಾಚಿಸಿದ್ದಾರೆ.
ಅಬುಧಾಬಿಯಲ್ಲಿ ಸಿಲುಕಿದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಿವಾಸಿ ಯೋಗೇಶ ಖಾತೇದಾರ, ಬಳ್ಳಾರಿಯ ಮೂವರು, ಇರಾನ್ ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡ್ತಿದ್ದ ತುಮಕೂರು ಗುಬ್ಬಿ ಮೂಲದ ಮನೋಜ್, ಬಾಗಲಕೋಟೆ ಬೀಳಗಿ ಎಂಜಿನಿಯರ್ ಗಿರೀಶ್ ಕೆರೂರು, ದೋಹಾದಲ್ಲಿ ಸಿಲಕಿರುವ ಬಾಗಲಕೋಟೆ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಗೀತಾ ಭಂಡಾರಿ ಸೇರಿದಂತೆ ಹಲವರು ಭಾರತಕ್ಕೆ ಮರಳಲು ನಿರ್ಧರಿಸಿದ್ದು, ಸದ್ಯ ಸ್ಥಿತಿ ಕೆಟ್ಟದಾಗಿರೋದ್ರಿಂದ ಸಹಾಯವನ್ನು ಎದುರು ನೋಡುತ್ತಾ ವಿವಿಧ ದೇಶಗಳಲ್ಲಿದ್ದಾರೆ. ಆದರೆ, ಯಾವಾಗ ಭಾರತ ಗಟ್ಟಿ ನಿರ್ಧಾರ ಮಾಡಿ ವಿದೇಶಗಳಲ್ಲಿರುವ ರಾಯಭಾರಿ ಕಚೇರಿ ಅಧಿಕಾರಿಗಳ ಮೂಲಕ ಕರೆದೊಯ್ಯುವ ವ್ಯವಸ್ಥೆ ಮಾಡುತ್ತೋ ಅಂತಾ ಎದುರು ನೋಡುತ್ತಿದ್ದಾರೆ. ಇವರ ಪೋಷಕರು, ಕುಟುಂಬಸ್ಥರಂತೂ ಸರಿಯಾದ ನಿದ್ದೆಯಿಲ್ಲದೇ ಪ್ರತೀ ಕ್ಷಣವೂ ತಮ್ಮವರ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
