Udupi| ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಉಡುಪಿ ಜಿಲ್ಲೆಯ ಮಣಿಪಾಲದ ಟೈಗರ್‌ ಸರ್ಕಲ್ ಬಳಿಯಿರುವ ಬಸ್‌ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಯುವಕ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೋರ್ವ ಯುವಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ 1 ಗಂಟೆ ಅಂದಾಜಿಗೆ ನಡೆದಿದೆ.

ಉತ್ತರಾಖಂಡ್ ನಿವಾಸಿ ಕಾರ್ತಿಕೇಯ್ ಶರ್ಮಾ (21) ಘಟನೆಯಲ್ಲಿ ಸಾವಿಗೀಡಾಗಿದ್ದು, ಈತನ ಜತೆಗಿದ್ದ ಉತ್ತರ ಗೋವಾದ ನಿವಾಸಿ ಹರ್ಷ ಹಾರ್ಡಿಂಗ್ (24) ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ಯುವಕ ಹಾಗೂ ಗಾಯಾಳುಗಳಿಬ್ಬರೂ ಮಣಿಪಾಲದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದರು. ಸೋಮವಾರ ತಡರಾತ್ರಿ 1 ಗಂಟೆಯ ಅಂದಾಜಿಗೆ ರಾ.ಹೆ. 169(ಎ)ರಲ್ಲಿ ಮಣಿಪಾಲ ಈಶ್ವರ ನಗರದಿಂದ ಸಿಂಡಿಕೇಟ್‌ ಸರ್ಕಲ್‌ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಕಾರು ಚಾಲನೆ ಮಾಡುತ್ತಿದ್ದ ಕಾರ್ತಿಕೇಯ್ ಶರ್ಮಾ ಟೈಗರ್ ಸರ್ಕಲ್ ಬಳಿಯಿರುವ ಬಸ್‌ ನಿಲ್ದಾಣದತ್ತ ಏಕಾಏಕಿ ಎಡಕ್ಕೆ ತಿರುಗಿಸಿದ್ದ. ಇದರಿಂದ ಪಾದಾಚಾರಿ ಮಾರ್ಗದ ಮೇಲೆ ಹತ್ತಿದ ಕಾರು ಬಸ್‌ ನಿಲ್ದಾಣದ ಕಲ್ಲುಗಳಿಗೆ ಢಿಕ್ಕಿ ಹೊಡೆದು ನೇರವಾಗಿ ಉಲ್ಟಾ ಬಿದ್ದಿತ್ತು.

ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಮಣಿಪಾಲ ಪೊಲೀಸರು, ಕಾರಿನೊಳಗೆ ಸಿಲುಕಿದ್ದ ಕಾರ್ತಿಕ್ ಹಾಗೂ ಹರ್ಷನನ್ನು ಹೊರಕ್ಕೆಳೆದು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಈ ಘಟನೆಯಲ್ಲಿ ಕಾರ್ತಿಕ್ ಕೆ. ಶರ್ಮಾ ತಲೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತಲೆ, ಕೈ-ಕಾಲಿಗೆ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದ ಹರ್ಷ ಹಾರ್ಡಿಂಗ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದು ವೇಳೆ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸದಿದ್ದಲ್ಲಿ ಗಾಯಾಳು ಹರ್ಷ ಹಾರ್ಡಿಂಗ್ ಕೂಡಾ ಸಾವನ್ನಪ್ಪುವ ಸಾಧ್ಯತೆಗಳಿತ್ತು ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ. ಘಟನೆಯ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸೀಟ್ ಬೆಲ್ಟ್ ಹಾಕದೆ ಪ್ರಮಾದ| ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾವಣೆ ಮಾಡಿದ್ದರೂ ಈ ಯುವಕರಿಬ್ಬರು ಕಾರಿನ ಸೀಟ್‌ ಬೆಲ್ಟ್ ಹಾಕಿರಲಿಲ್ಲ. ಪೊಲೀಸರು ಇಬ್ಬರು ಯುವಕರನ್ನು ಕಾರಿನೊಳಗಿನಿಂದ ಹೊರಕ್ಕೆ ಎಳೆಯುವಾಗ ಇಬ್ಬರು ಕೂಡಾ ಸೀಟ್ ಧರಿಸದಿರುವುದು ಪತ್ತೆಯಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿದ್ದರೆ ಕಾರ್ತಿಕ್ ಕೆ. ಶರ್ಮಾ ಸಾವನ್ನಪ್ಪುತ್ತಿರಲಿಲ್ಲ.
ಇನ್ನು ಟೈಗರ್ ಸರ್ಕಲ್ ಬಳಿಯಿರುವ ಬಸ್‌ ನಿಲ್ದಾಣಗಳ ವ್ಯಾಪ್ತಿಯಲ್ಲಿ ಬೀದಿ ಬದಿ ಕ್ಯಾಂಟೀನ್ ನಡೆಸುವವರಿದ್ದು, ನಿನ್ನೆ ರಾತ್ರಿ ಕ್ಯಾಂಟೀನ್ ಮುಚ್ಚಿದ ಬಳಿಕ ಪಾತ್ರೆಗಳನ್ನು ತೊಳೆಯುತ್ತಿದ್ದಾಗ ಏಕಾಏಕಿ ಅತೀ ವೇಗದಲ್ಲಿ ಬಂದ ಕಾರು ಕ್ಯಾಂಟೀನ್ ಕಾರ್ಮಿಕರು ನೋಡು ನೋಡುತ್ತಿದ್ದಂತೇ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದಿತ್ತು. ಈ ಯುವಕರಿಬ್ಬರು ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದರಿಂದಲೇ ಈ ಘಟನೆ ನಡೆದಿದೆ ಎಂಬುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ.