Karwar| ಇಂದಿನ ಡಿಜಿಟಲ್ ಯುಗದಲ್ಲಿ ಅಪರಾಧಗಳ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು, ಕಳ್ಳರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್ ಹೇಳಿದರು.
ಶಿರಸಿ ತಾಲೂಕಿನ ಗುರುಸಿದ್ದೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಮೊಬೈಲ್‌ಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಿ ಅವರು ಮಾತನಾಡಿ, ಪ್ರತಿಯೊಬ್ಬ ಸಿಬ್ಬಂದಿಯೂ ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ಅಪ್‌ಡೇಟ್ ಆಗಿದ್ದಾರೆ ಎಂದು ಹೇಳಿದರು.
ಶಿರಸಿ ಉಪವಿಭಾಗ ವ್ಯಾಪ್ತಿಯ ಏಳು ಪೊಲೀಸ್ ಠಾಣೆಗಳಲ್ಲಿ ಕಳೆದ ಆರು ತಿಂಗಳಲ್ಲಿ ನಡೆದಿದ್ದ 17 ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಈ ಕಾರ್ಯಾಚರಣೆಯಲ್ಲಿ ಬಂಧಿತ ಕಳ್ಳರಿಂದ ಜಪ್ತಿಮಾಡಿದ್ದ ಚಿನ್ನ, ಬೆಳ್ಳಿ, ನಗದು ಸೇರಿದಂತೆ 50 ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ಇಂದು ಶನಿವಾರ ಸಂಬಂಧಿತ ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಈ ಪ್ರಕರಣಗಳು ಶಿರಸಿ ಉಪವಿಭಾಗದ ಶಿರಸಿ ನಗರ ಠಾಣೆ, ಮಾರುಕಟ್ಟೆ ಠಾಣೆ, ಬನವಾಸಿ ಠಾಣೆ, ಗ್ರಾಮೀಣ ಠಾಣೆ, ಮುಂಡಗೋಡ, ಯಲ್ಲಾಪುರ ಹಾಗೂ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದವು.
