ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಯೋಜನೆಯ ಮಹತ್ವ ಹಾಗೂ ಪರಿಸರ ಸ್ನೇಹಿ ಅಂಶಗಳ ಬಗ್ಗೆ ಬಂಗಾರಮಕ್ಕಿ ಸ್ವಾಮೀಜಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಪರಿಸರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದೆ. ಈ ಯೋಜನೆಯಿಂದ ಯಾವುದೇ ಕಾಡು ನಾಶವಾಗುವುದಿಲ್ಲ. ಸಮುದ್ರಕ್ಕೆ ಸೇರುವ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇರುವ ಎರಡು ಜಲಾಶಯಗಳ ನಡುವೆ ಪೈಪ್‌ಲೈನ್ ಮೂಲಕ ನೀರನ್ನು ಹರಿಸಿ ವಿದ್ಯುತ್ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಹೊಸ ಜಲಾಶಯ ನಿರ್ಮಾಣ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಬಂಗಾರಮಕ್ಕಿ ಸ್ವಾಮೀಜಿಯವರು ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ, ಯೋಜನೆ ಆಗುವುದಿದ್ದರೇ ಅದು ತಮ್ಮ ಹೆಣದ ಮೇಲೆ ಆಗಲಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯವರ ಬಗ್ಗೆ ನಮಗೆ ಅಪಾರ ಗೌರವವಿದೆ. ಯೋಜನೆಯ ಸಂಪೂರ್ಣ ಮಾಹಿತಿ ನೀಡಿ ಇದರ ಪ್ರಯೋಜನಗಳ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗುವುದು ಎಂದರು.

ಯೋಜನೆಗೆ ಕಡಿಮೆ ಪ್ರಮಾಣದ ಭೂಮಿ ಮಾತ್ರ ಅಗತ್ಯವಿದ್ದು, ಸುಮಾರು 25 ರಿಂದ 125 ಎಕರೆ ಪ್ರದೇಶದಲ್ಲಿ ಪೈಪ್‌ಲೈನ್ ಹಾಗೂ ಸಂಬಂಧಿತ ಕಾಮಗಾರಿಗಳು ನಡೆಯಲಿವೆ. ಕಾಮಗಾರಿ ಬಳಿಕ ಆ ಪ್ರದೇಶದಲ್ಲಿ ಪುನಃ ಹಸಿರು ವಾತಾವರಣ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಯೋಜನೆಯಿಂದ ರಾಜ್ಯಕ್ಕೆ ಸುಮಾರು ಎರಡು ಸಾವಿರ ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಲಭ್ಯವಾಗಲಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು ಇದು ಸಹಕಾರಿಯಾಗಲಿದೆ ಎಂದರು.

ಹಿಮಾಚಲ ಪ್ರದೇಶದಲ್ಲಿ ನ್ಯಾಷನಲ್ ಹೈವೇ ಮಾಡಲು ಟನಲ್ ಮಾಡಲಾಗಿದೆ. ಅಲ್ಲಿ ಪರಿಸರ ಇಲ್ಲವಾ? ಎಂದು ಪ್ರಶ್ನಿಸಿದ ಸಚಿವರು, ಶರಾವತಿ ಜಲಾಶಯ ನಿರ್ಮಾಣದ ಸಮಯದಲ್ಲೂ ದೊಡ್ಡ ಪ್ರಮಾಣದ ಭೂಮಿ ಮುಳುಗಡೆಯಾಗಿತ್ತು. ಆದರೆ ಈಗಿನ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಕಡಿಮೆ ಭೂ ಬಳಕೆಯಲ್ಲೇ ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಚಿವ ಜಾರ್ಜ್ ಹೇಳಿದರು.

ಅರಣ್ಯ ಇಲಾಖೆ, ಪರಿಸರ ಮಂಡಳಿ ಹಾಗೂ ತಜ್ಞರ ಸಲಹೆ ಮತ್ತು ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಯೋಜನೆ ಅನುಷ್ಠಾನಗೊಳಿಸಲಾಗುವುದು. ಪರಿಸರ ಸಂರಕ್ಷಣೆ ಜೊತೆಗೆ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.