Ankola| ತುಮಕೂರು ಬಳಿ ಕಾರಿನಲ್ಲೇ ನಾಡ ಬಾಂಬ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಪ್ರೇಮಿ ನಾಗೇಂದ್ರ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಂಬ್ ಪೂರೈಸಿದ್ದ್ಯಾರು ಎಂದು ತನಿಖೆ ನಡೆಸುತ್ತಿರುವ ಪೋಲಿಸರು, ಅಂಕೋಲಾದ ಅರಣ್ಯವೊಂದರಲ್ಲಿ ಅಡಗಿಸಿಟ್ಟಿದ್ದ ಮೂರು ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಹೊನ್ನಳ್ಳಿಯ ನಾರಾಯಣಗೌಡ, ನಾಗರಾಜಗೌಡ ಹಾಗೂ ಶಿರಗುಂಜಿಯ ಸಂದೀಪ್ ಗೌಡ ಎಂಬುವವರೇ ಬಂಧಿತರು.

ಜೂನ್‌ 30ರಂದು ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ಹಾಗೂ ಸಿಬ್ಬಂದಿ ಹಟ್ಟಿಕೇರಿ ಭಾಗದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಹೊನ್ನಳ್ಳಿ ಗ್ರಾಮದ ನಾರಾಯಣಗೌಡ ಹಾಗೂ ನಾಗರಾಜಗೌಡ ಎಂಬವರು ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ Anti-Sabotage Check Team (ASC) ಹಾಗೂ Bomb Detection and Disposal Squad (BDDS) ತಂಡದೊಂದಿಗೆ ಹೊನ್ನಳ್ಳಿ ಗ್ರಾಮದಲ್ಲಿರುವ ನಾರಾಯಣಗೌಡ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ, ನಾರಾಯಣ ಗೌಡ ಮತ್ತು ನಾಗರಾಜ ಗೌಡ ಅವರು ಮೀನು ಹಿಡಿಯಲು ನಾಡಬಾಂಬ್‌ಗಳನ್ನು ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಸಂಬಂಧಿಕ ನಾಗೇಂದ್ರ ಗೌಡ ತುಮಕೂರಿನಲ್ಲಿ ಬಾಂಬ್ ಸ್ಫೋಟದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ತಮ್ಮಲ್ಲಿದ್ದ ನಾಡಬಾಂಬ್‌ಗಳನ್ನು ಹೆದರಿ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ.

ನಂತರ ಆರೋಪಿಗಳ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಅಡಗಿಸಿಟ್ಟಿದ್ದ ಮೂರು ಕಚ್ಚಾ ನಾಡಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಅವುಗಳನ್ನು ಸ್ಫೋಟಕ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ರವಾನಿಸಲಾಗಿದೆ. ಈ ನಾಡಬಾಂಬ್‌ಗಳನ್ನು ಶಿರಗುಂಜಿಯ ಸಂದೀಪ್ ಗೌಡ ಎಂಬಾತ ನೀಡಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ Explosive Substances Act 1908ರ ಕಲಂ 4, 5 ಹಾಗೂ ಬಿಎನ್‌ಎಸ್ 2023ರ ಕಲಂ 288 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.