ಸಮುದ್ರದಲ್ಲಿ ಮೀನುಗಾರಿಕೆ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಅಪರೂಪದ ಆಮೆಯನ್ನು ಮುರುಡೇಶ್ವರದ ಜಸ್ಟ್ ಡೈವ್ ಸ್ಕೂಬಾ ಡೈವಿಂಗ್ ತಂಡ ರಕ್ಷಿಸಿ ಮಾನವೀಯತೆ ಮೆರೆದಿದೆ.

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್‌ಗಾಗಿ ನೇತ್ರಾಣಿ ದ್ವೀಪಕ್ಕೆ ಕರೆದೊಯ್ದು ಮರಳುತ್ತಿದ್ದ ವೇಳೆ, ಆಮೆ ಸಮುದ್ರ ಮಧ್ಯದಲ್ಲಿ ಬಲೆಗೆ ಸಿಲುಕಿಕೊಂಡು ತೀವ್ರವಾಗಿ ಒದ್ದಾಡುತ್ತಿತ್ತು.

ಈ ಆಮೆಯನ್ನು ಗಮನಿಸಿದ ತಂಡದ ಸದಸ್ಯರು ಬೋಟ್‌ ನಿಲ್ಲಿಸಿ, ಸಮುದ್ರಕ್ಕೆ ಇಳಿದು ಆಮೆಯನ್ನು ಸುರಕ್ಷಿತವಾಗಿ ಹಿಡಿದದ್ದಲ್ಲದೇ, ಬಲೆಯನ್ನು ಕತ್ತರಿಸಿದ್ದಾರೆ.

ನಂತರ ಆಮೆಯನ್ನು ಮತ್ತೆ ಸಮುದ್ರಕ್ಕೆ ಬಿಡಲಾಗಿದ್ದು, ಈ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮುದ್ರ ಜೀವಿಗಳ ಸಂರಕ್ಷಣೆಗೆ ಇಂತಹ ಜಾಗೃತಿಯುತ ಕ್ರಮಗಳು ಅಗತ್ಯವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.