Karwar: ತಾಲೂಕಿನ ಸದಾಶಿವಗಡದಲ್ಲಿ ನಿಯಮ ಉಲ್ಲಂಘಿಸಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣದ) ಜಿಲ್ಲಾಧ್ಯಕ್ಷ ಅಕ್ಷಯ್ ಎಸ್.ಬಿ. ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳನ್ನು ಗ್ರಾಮ ಪಂಚಾಯಿತಿ, ಟೌನ್ ಪ್ಲಾನಿಂಗ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಗತ್ಯ ಅನುಮತಿ ಪಡೆಯದೇ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನೂ ಕೆಲವು ಕಟ್ಟಡಗಳು ಪಡೆದಿರುವ ಪರವಾನಿಗೆಗಿಂತ ಹೆಚ್ಚಿನ ಮಹಡಿಗಳನ್ನು ನಿರ್ಮಿಸಿವೆ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ವಾಹನ ನಿಲುಗಡೆಗೆ ಸೂಕ್ತ ಸ್ಥಳ ಹಾಗೂ ಅಗ್ನಿಶಾಮಕ ಇಲಾಖೆಯ ಅನುಮತಿಯೂ ಇಲ್ಲ. ಈ ಎಲ್ಲ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಸದಾಶಿವಗಡದಲ್ಲಿ ರಾಜಕೀಯ ಪಕ್ಷದ ಪ್ರಮುಖರಿಗೆ ಆತ್ಮೀಯರಾಗಿರುವ ಉದ್ಯಮಿಯೊಬ್ಬ ಯಾವುದೇ ಪರವಾನಿಗೆ ಇಲ್ಲದೆ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದಾನೆ. ಈತ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂರು ಮಹಡಿಗಳಿಗೆ ಮಾತ್ರ ಅನುಮತಿ ಪಡೆದಿದ್ದರೂ, ಜಿ+6 ಮಹಡಿಗಳ ಕಟ್ಟಡ ನಿರ್ಮಿಸಿರುವುದಾಗಿ ಅವರು ಆರೋಪಿಸಿದರು.
ಸದಾಶಿವಗಡದಲ್ಲಿ ನಡೆಯುತ್ತಿರುವ ಅಕ್ರಮ ಅಪಾರ್ಟ್‌ಮೆಂಟ್ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರವೇ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಕ್ಷಯ್ ಎಸ್.ಬಿ. ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಬಾಂದೇಕರ, ಕೃಷ್ಣಾ ಬಂಟ, ಸಂದೀಪ ಕಲಗುಟಕರ, ಅಶೋಕ ರಾಣೆ, ಮಾರುತಿ ರಾಯ್ಕರ, ಹಸನ್ ಶೇಖ್, ರೂಪೇಶ್ ನಾಯ್ಕ ಸೇರಿದಂತೆ ಹಲವು ಕರವೇ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
