Karwar| ಮಹಿಳಾ ಮೀಸಲಾತಿ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮೋದಿ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಅವರು ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಕ್ಷಬೇಧ ಮರೆತು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಇದೇ 15 ಮತ್ತು 16ರಂದು ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ವಿಶೇಷ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಲಾಭ-ನಷ್ಟ ಯೋಚಿಸದೆ ಒಕ್ಕೋರಲಿನಿಂದ ಈ ವಿಧೇಯಕಕ್ಕೆ ಬೆಂಬಲ ನೀಡಬೇಕು. ಇದರಿಂದಾಗಿ ಮಹಿಳೆಯರ ದಶಕಗಳ ಕನಸು ನನಸಾಗಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಆಡಳಿತದಲ್ಲಿ
ಕೇಂದ್ರದ ಹಲವು ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಒಬ್ಬ ಸಾಮಾನ್ಯ ಮಹಿಳೆಯನ್ನು ಈ ದೇಶದ‌ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಇನ್ನು ಪಕ್ಷ ಹಾಗೂ ಸರ್ಕಾರದ ನಿರ್ಧಾರಗಳಲ್ಲಿ ಮಹಿಳೆಯರಿಗೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ. ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಲಿದೆ. ಯಾವುದೇ ರಾಜಕೀಯ ಪಕ್ಷವು ಈ ಮೀಸಲಾತಿಗೆ ವಿರೋಧಿಸುವುದಿಲ್ಲ ಎಂಬ ವಿಶ್ವಾಸ ರೂಪಾಲಿ ನಾಯ್ಕ ವ್ಯಕ್ತಪಡಿಸಿದರು.

ಇನ್ನು ಕೇಂದ್ರ‌ ಸರ್ಕಾರದ ಮುದ್ರಾ ಯೋಜನೆ, ಪಿಎಂ‌ ರೋಜಗಾರ್ ಯೋಜನೆ, ಸ್ಟ್ಯಾಂಡ್ ಅಪ್ ಯೋಜನೆ‌ ಸೇರಿದಂತೆ ಹಲವು ಯೋಜನೆಗಳನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದ್ಬಳಕೆ ಮಾಡಿಕೊಂಡು ‘ನಾರಿಶಕ್ತಿ’ ಗೆ ಉತ್ತಮ ಉದಾಹರಣೆಯಾಗಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿ ಮಹಿಳಾ ಪಾಲುದಾರಿಕೆ ಹೆಚ್ಚಳವಾಗಿದೆ. ನಾರಿಶಕ್ತಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಈ ಮಹಿಳಾ ಮೀಸಲಾತಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ರೂಪಾಲಿ ನಾಯ್ಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಾಲಾ ಹುಲಸ್ವಾರ್, ಕಲ್ಪನಾ ನಾಯ್ಕ, ನಯನಾ ನೀಲಾವರ, ರೇಷ್ಮಾ ಮಾಳ್ಸೇಕರ್ ಹಾಗೂ ಇನ್ನಿತರರು ಇದ್ದರು.