Kumta| ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣದಲ್ಲಿ, ಘಟನೆ ನಡೆದ ಕೇವಲ 24 ಗಂಟೆಯೊಳಗೆ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕುಮಟಾ ಪೊಲೀಸರ ತಂಡ ಯಶಸ್ವಿಯಾಗಿದೆ.
ಕುಮಟಾದ ಪಟ್ಟಣದ ಬಸ್ತಿಪೇಟೆ ಬಳಿಯ ಮನೆಯೊಂದಕ್ಕೆ ರಾತ್ರಿ ವೇಳೆ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿರುವಾಗ ಕಿಟಕಿಯಿಂದ ಬಾಗಿಲು ತೆರೆದು ಒಳನುಗ್ಗಿದ ಕಳ್ಳ, ಕಪಾಟಿನ ಬೀಗ ಮುರಿದು ಅದರಲ್ಲಿದ್ದ 80 ಸಾವಿರ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಕುರಿತು ಮನೆ ಮಾಲೀಕರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಕುಮಟಾ ವೃತ್ತದ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದು, ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಸೊರಬಾ ತಾಲೂಕಿನ ಚಂದ್ರಗುತ್ತಿ ಗ್ರಾಮದ ನಿವಾಸಿ ಬಸವರಾಜ ಅಲಿಯಾಸ್ ಬಸ್ಯಾ ಶಿವಪ್ಪ ಗೌಡ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಈ ಹಿಂದೆಯೂ ಕುಮಟಾ, ಗೋಕರ್ಣ, ಹೊನ್ನಾವರ, ಭಟ್ಕಳ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಆರೋಪಿ ಪತ್ತೆಗೆ ಶ್ರಮಿಸಿದ ಕುಮಟಾ ಸಿಪಿಐ ಯೋಗೇಶ್ ಕೆ.ಎಂ. ಹಾಗೂ ಪಿಎಸ್‌ಐಗಳಾದ ಮಯೂರ ಪಟ್ಟಣಶೆಟ್ಟಿ, ರವಿ ಗುಡ್ಡಿ, ಸಾವಿತ್ರಿ ನಾಯಕ್ ಮತ್ತು ಸಿಬ್ಬಂದಿಗಳಾದ ದಯಾನಂದ ನಾಯಕ್, ಗಣೇಶ ನಾಯಕ್, ಕಿರಣ ನಾಯಕ್, ಪ್ರದೀಪ ನಾಯಕ್ ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
