ಕಾರವಾರ: ಪಹರೆ ವೇದಿಕೆ ನಂದನಗದ್ದಾ, ಬಾಡ ಘಟಕದ ೨೦೦ನೇ ವಾರದ ಸ್ವಚ್ಛತಾ ಸಂಭ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು.

ಬಾಡ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾವಂತ ಸಭಾಭವನದಲ್ಲಿ ಪೊಲೀಸ್ ಉಪಾಧೀಕ್ಷಕ ಎಸ್.ವಿ.ಗಿರೀಶ್ ಉದ್ಘಾಟಿಸಿ, ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ್ದು. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಇರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಿವಾಜಿ ಬಾಡದ ಕಲಾ ಮತ್ತು ವಾಣಿಜ್ಯ ಹಾಗೂ ಬಿಸಿಎ ಕಾಲೇಜಿನ ಪ್ರಾಚಾರ್ಯೆ ಡಾ. ಅನುರಾಧಾ ನಾಯ್ಕ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು ಎಂಬ ನಾಗರಿಕ ಪ್ರಜ್ಞೆಯನ್ನು ಪಹರೆ ವೇದಿಕೆ ಜನರಲ್ಲಿ ಬೆಳೆಸುತ್ತಿದೆ. ಇದು ಪ್ರಶಂಸನೀಯವಾದುದು ಎಂದರು. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಮಹಾಲಕ್ಷ್ಮೀ. ಪಹರೆ ವೇದಿಕೆಯಲ್ಲಿ ಜನತೆ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಜನತೆ ತಮ್ಮ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಪ್ರಕಾಶ ರಾಣೆ, ಕಾರವಾರದ ಸ್ವಚ್ಛತೆ ಕಾಪಾಡುವಲ್ಲಿ   ಪಹರೆ ವೇದಿಕೆಯ ಪಾತ್ರ ದೊಡ್ಡದು. ಜನತೆ ಹೆಚ್ಚು ಹೆಚ್ಚು ಪಹರೆ ವೇದಿಕೆಯೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು.

ಪಹರೆ ವೇದಿಕೆ ಕಾರವಾರದ ಕಾರ್ಯದರ್ಶಿ, ಟಿ. ಬಿ.ಹರಿಕಾಂತ, ಕೈಗಾ ನಿವೃತ್ತ ನೌಕರ ಜಗದೀಶ ಗಾಂವಕರ ಮಾತನಾಡಿದರು. ಪಹರೆ ನಂದನಗದ್ದಾ, ಬಾಡ ಘಟಕದ ಗೌರವಾಧ್ಯಕ್ಷ ಅನಿಲ ಕೊಚರೇಕರ ಉಪಸ್ಥಿತರಿದ್ದರು. ಕಾರವಾರ ಪಹರೆ ವೇದಿಕೆ ಖಜಾಂಚಿ ಎಲ್.ಎಸ್.ಫರ್ನಾಂಡಿಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪಹರೆ ವೇದಿಕೆ ನಡೆದುಬಂದ ದಾರಿಯನ್ನು ವಿವರಿಸಿದರು. ಡಿ.ಜೆ.ನಾಯ್ಕ ವಂದಿಸಿದರು. ಉಪನ್ಯಾಸಕ ಗಜಾನನ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.